ಮಧ್ಯಪ್ರದೇಶ : ಸೋಶಿಯಲ್ ಮೀಡಿಯಾ ಯುಗದಲ್ಲಿ ಪ್ರೀತಿ, ಮದುವೆ ಮತ್ತು ಕೌಟುಂಬಿಕ ಹೈಡ್ರಾಮಾಗಳು ದಿನಕ್ಕೊಂದರಂತೆ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಮಧ್ಯಪ್ರದೇಶದ ಛತರ್‌ಪುರ ಜಿಲ್ಲೆಯ ಲವಕುಶನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಂತಹುದೇ ಒಂದು ರೋಚಕ ಘಟನೆ ನಡೆದಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯೇ ರಣರಂಗವಾಗಿ ಮಾರ್ಪಟ್ಟಿದೆ. ಸಂಬಂಧದಲ್ಲಿ ತನಗೆ ಚಿಕ್ಕಪ್ಪನಾಗಬೇಕಾದ ವ್ಯಕ್ತಿಯನ್ನೇ ಕೈಹಿಡಿದು ಓಡಿಹೋದ ಯುವತಿ, ಈಗ ಪ್ರಾಣಭೀತಿಯಿಂದ ಪೊಲೀಸರ ಶರಣಾಗಿದ್ದಾಳೆ!
ಛತರ್‌ಪುರ ಜಿಲ್ಲೆಯ ಗಿಲೌಹಾ ಗ್ರಾಮದ ಮೋಹನ್ ಸಿಂಗ್ ಯಾದವ್ ಎಂಬುವವರ ಹಿರಿಯ ಮಗಳು ಪ್ರತಿಮಾ ಯಾದವ್, ಕಳೆದ ಏಪ್ರಿಲ್ 2 ರಂದು ರಾತ್ರೋರಾತ್ರಿ ಮನೆಯಿಂದ ದಿಢೀರನೆ ನಾಪತ್ತೆಯಾಗಿದ್ದಳು. ಕಂಗಾಲಾದ ಕುಟುಂಬಸ್ಥರು ಆಕೆಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಪ್ರತಿಮಾ, ಸಂಬಂಧದಲ್ಲಿ ತನಗೆ ಚಿಕ್ಕಪ್ಪನಾಗಬೇಕಾದ ಹನ್ಸ್‌ಪುರಾ ಗ್ರಾಮದ ಧರ್ಮೇಂದ್ರ ಯಾದವ್ ಎಂಬುವವನ ಜೊತೆ ಓಡಿಹೋಗಿರುವುದು ಕುಟುಂಬಕ್ಕೆ ತಿಳಿದುಬಂದಿದೆ.
ಯುವತಿ ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ಈ ನಡುವೆ, ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಎಂಟ್ರಿ ಕೊಟ್ಟಿತ್ತು! ತಾವು ಘಾಜಿಯಾಬಾದ್‌ಗೆ ಹೋಗಿ ಕಾನೂನುಬದ್ಧವಾಗಿ ಮದುವೆಯಾಗಿದ್ದೇವೆ ಎಂದು ಘೋಷಿಸಿ, ಕೈಯಲ್ಲಿ ಮದುವೆ ಸರ್ಟಿಫಿಕೇಟ್ ಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಸಾಲು ಸಾಲು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋಗಳು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು.
ಇನ್ನೊಂದೆಡೆ, ಯುವತಿಯ ತಂದೆ ಮೋಹನ್ ಸಿಂಗ್ ಯಾದವ್ ಮತ್ತು ಕುಟುಂಬಸ್ಥರು ಪೊಲೀಸರ ಕಾರ್ಯವೈಖರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಾವು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಮುಖ್ಯಮಂತ್ರಿ ಹೆಲ್ಪ್‌ಲೈನ್ (181) ಗೆ ನೀಡಿದ್ದ ದೂರನ್ನು ವಾಪಸ್ ಪಡೆಯುವಂತೆ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಒತ್ತಡ ಹೇರಿದ್ದರು ಮತ್ತು ಹುಡುಕಿಕೊಡಲು ಲಂಚದ ಬೇಡಿಕೆ ಇಟ್ಟಿದ್ದರು ಎಂದು ಕುಟುಂಬಸ್ಥರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಯುವತಿ ನೌಗಾಂವ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾಳೆ ಮತ್ತು ತನ್ನ ಹೇಳಿಕೆ ದಾಖಲಿಸಲು ನೇರವಾಗಿ ಎಸ್ಪಿ ಕಚೇರಿಗೆ ಬರುತ್ತಿದ್ದಾಳೆ ಎಂಬ ವಿಷಯ ತಿಳಿದ ತಕ್ಷಣ, ಆಕೆಯ ಕುಟುಂಬಸ್ಥರು ಆಕ್ರೋಶದಿಂದ ಎಸ್ಪಿ ಕಚೇರಿ ಆವರಣದಲ್ಲಿ ಜಮಾಯಿಸಿದ್ದರು. ಜೋಡಿ ಅಲ್ಲಿಗೆ ಬರುತ್ತಿದ್ದಂತೆ ಕುಟುಂಬಸ್ಥರು ದಾಳಿಗೆ ಮುಂದಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ. ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಮಹಿಳಾ ಪೊಲೀಸ್ ಪಡಯನ್ನು ಸ್ಥಳಕ್ಕೆ ಕರೆಯಿಸಲಾಯಿತು.
ಪೊಲೀಸರ ರಕ್ಷಣೆಯಲ್ಲಿ ನಿಂತ ಯುವತಿ ಪ್ರತಿಮಾ ಯಾದವ್, “ನಾನು ನನ್ನ ಗಂಡನ ಜೊತೆಯಲ್ಲೇ ಬದುಕಲು ಬಯಸುತ್ತೇನೆ. ನಾವು ಮದುವೆಯಾಗಿದ್ದೇವೆ. ಆದರೆ ನನ್ನ ಕುಟುಂಬದವರೇ ನನ್ನ ಅತ್ತೆ-ಮಾವನಿಗೆ ಕಿರುಕುಳ ನೀಡುತ್ತಿದ್ದಾರೆ. ಈಗ ನಮ್ಮಿಬ್ಬರನ್ನೂ ಪ್ರಾಣಸಹಿತ ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ,” ಎಂದು ಪೊಲೀಸರೆದುರು ಕಣ್ಣೀರು ಹಾಕುತ್ತಾ ತಮಗೆ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾಳೆ. ಕೌಟುಂಬಿಕ ಮರ್ಯಾದೆ ಮತ್ತು ಸಂಬಂಧಗಳ ಬೇಲಿಯನ್ನು ಮುರಿದು ಮದುವೆಯಾದ ಈ ಜೋಡಿಯ ಹೈಡ್ರಾಮಾ ಸದ್ಯ ಛತರ್‌ಪುರದಲ್ಲಿ ಹೈವೋಲ್ಟೇಜ್ ಸದ್ದು ಮಾಡುತ್ತಿದ್ದು, ಪೊಲೀಸರು ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


















