ಮನೆ ಸುದ್ದಿ ಜಾಲ ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ – ಬದುಕುಳಿದ ಪ್ರಯಾಣಿಕರು

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ – ಬದುಕುಳಿದ ಪ್ರಯಾಣಿಕರು

0

ಹೈದರಾಬಾದ್ : ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಹೈದರಾಬಾದ್‌ನ ಕೆಪಿಎಚ್‌ಬಿಯಲ್ಲಿ ನಡೆದಿದೆ. ಸಿಬ್ಬಂದಿಯ ಜಾಗರೂಕತೆಯಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 18ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಬಸ್ ಹೊತ್ತಿಯುರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶುಕ್ರವಾರ (ಏ.17) ರಾತ್ರಿ ಕೆಪಿಎಚ್‌ಬಿಯಲ್ಲಿ ಶ್ರೀ ದುರ್ಗಾ ಮಹೇಶ್ವರಿ ಟ್ರಾವೆಲ್ಸ್‌ಗೆ ಸೇರಿದ ಎಸಿ ಸ್ಲೀಪರ್ ಬಸ್ ಮಿಯಾಪುರದಿಂದ ಹೊರಟು ಆಂಧ್ರಪ್ರದೇಶದ ಪಾಲಕೊಲ್ಲು ಮಾರ್ಗವಾಗಿ ಎಸ್‌ಆರ್ ನಗರ ಕಡೆಗೆ ಹೋಗುತ್ತಿತ್ತು. ಈ ವೇಳೆ ಚಾಲಕನ ಕ್ಯಾಬಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದು, ದೊಡ್ಡ ದುರಂತವೊಂದು ತಪ್ಪಿದೆ.

ಕೂಡಲೇ ಸ್ಥಳಕ್ಕೆ ಟ್ರಾಫಿಕ್ ಸಿಐ ಜನಯ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ತಕ್ಷಣವೇ ನಿಯಂತ್ರಣಕ್ಕೆ ತಂದರು. ಈವರೆಗೂ ಯಾವುದೇ ಸಾವು, ನೋವು ವರದಿಯಾಗಿಲ್ಲ. ಈ ಘಟನೆಯಿಂದ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.