ಚೆನ್ನೈ/ಕೋಲ್ಕೊತಾ : ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಶುರುವಾಗಿದೆ. ಒಟ್ಟು 5.73 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸಂಜೆ 6 ಗಂಟೆವರೆಗೆ ಶಾಂತಿಯುತ ಮತದಾನಕ್ಕೆ ಒತ್ತು ನೀಡಲಾಗಿದೆ. ಈಗಾಗಲೇ ನಟ ಅಜಿತ್ ಕುಮಾರ್, ಕಮಲ್ ಹಾಸನ್, ನಟಿ ಶೃತಿ ಹಾಸನ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಕುಷ್ಭು ಸುಂದರ್ ಸೇರಿದಂತೆ ನಟ – ನಟಿಯರು ಇತರ ರಾಜಕೀಯ ಗಣ್ಯರು ಮತ ಚಲಾಯಿಸುತ್ತಿದ್ದಾರೆ.
ಒಟ್ಟು 33,133 ಸ್ಥಳಗಳಲ್ಲಿ 75,064 ಮತಗಟ್ಟೆಗಳಿದ್ದು, 3 ಲಕ್ಷಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿಯನ್ನ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ಸಲುವಾಗಿ 8,300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. 5,049 ಮತಗಟ್ಟೆಗಳಲ್ಲಿ3,025 ಮತಗಟ್ಟೆಗಳನ್ನ ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ತಿಳಿಸಿದ್ದಾರೆ.
ಅಲ್ಲದೇ 234 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಪ್ರಭಾವ ಬೀರುವ ಸಾಧ್ಯತೆಗಳಿರುವುದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಾರಿ ಡಿಎಂಕೆ, ಎಐಡಿಎಂಕೆ ನಡುವೆ ಹಾಗೂ ದಳಪತಿ ವಿಜಯ್ ನೇತೃತ್ವದ ಟಿವಿಕೆ ನಡುವೆ ಪೈಪೋಟಿ ಏರ್ಪಟ್ಟಿದೆ. ಎಂ.ಕೆ ಸ್ಟಾಲಿನ್ 2ನೇ ಅವಧಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸಿದ್ದಾರೆ. ಇತ್ತ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ 5 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ಗುರಿ ಹೊಂದಿದ್ದಾರೆ.
ಇನ್ನೂ ತಮಿಳುನಾಡಿನಲ್ಲಿ ಈ ಬಾರಿ 4,59,039 ಮೊದಲ ಮತದಾರರು ನೋಂದಣಿಯಾಗಿದ್ದಾರೆ. ಒಟ್ಟು 33,133 ಸ್ಥಳಗಳ 75,064 ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗವು 1,06,418 ಬ್ಯಾಲೆಟ್ ಯೂನಿಟ್, 75,064 ನಿಯಂತ್ರಣ ಘಟಕಗಳು ಮತ್ತು ವಿವಿಪಿಎಟಿ ಯಂತ್ರಗಳನ್ನ ನಿಯೋಜಿಸಿದೆ. ತಾಂತ್ರಿಕ ಅಡಚಣೆಗಳನ್ನು ತಪ್ಪಿಸಲು, ಇವಿಎಂಗಳಿಗೆ ಶೇ. 20 ಮತ್ತು ವಿವಿಪ್ಯಾಟ್‌ಗಳಿಗೆ ಶೇ. 30 ರಷ್ಟು ಮೀಸಲು ಕಾಯ್ದುಕೊಳ್ಳಲಾಗಿದೆ ಎಂದು ತಮಿಳುನಾಡು ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಇನ್ನೂ ಈ ಬಾರಿ ಮತದಾರರ ಮೇಲೆ ಪ್ರಭಾವ ಬೀರಲು ಹಣ ಮತ್ತು ಸಾಮಗ್ರಿಗಳ ಬಳಕೆಯ ವಿರುದ್ಧ ರಾಜ್ಯದಲ್ಲಿ ತೀವ್ರ ಜಾರಿ ಕ್ರಮ ಕೈಗೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ. 1,262 ಕೋಟಿ ತಲುಪಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಸತ್ಯಬ್ರತ ಸಾಹೂ ಹೇಳಿದ್ದಾರೆ. ಇದರಲ್ಲಿ 543 ಕೋಟಿ ನಗದು ಮತ್ತು ಇತರ ಸಾಮಗ್ರಿಗಳು ಸೇರಿವೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ಇಂದು ಮತದಾನ ನಡೆಯಲಿದೆ. ಉತ್ತರ ಬಂಗಾಳದ ಎಲ್ಲಾ 152 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಬಂಗಾಳದ ಮುರ್ಶಿದಾಬಾದ್, ಜರ್ಗಾಮ, ಮೇದಿನಿಪುರ, ಬಂಕುರಾ, ಪುರುಲಿಯಾ, ಪಶ್ಚಿಮ ಬರ್ಧಮಾನ್ ಮತ್ತು ಬಿರ್ಬುಮ್‌ನಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 16 ಜಿಲ್ಲೆಗಳ 152 ಕ್ಷೇತ್ರಗಳಿದ್ದು, 1,478 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೆಚ್ಚುವರಿ 4,660 ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಒಟ್ಟು ಮತಗಟ್ಟೆಗಳ ಪೈಕಿ 8,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ರಾಜ್ಯದಾದ್ಯಂತ 780ಕ್ಕೂ ಹೆಚ್ಚು ಕೇಂದ್ರ ಭದ್ರತಾ ಪಡೆಗಳ ಕಂಪನಿಗಳು ನಿಯೋಜನೆ ಮಾಡಿದೆ. ಮತದಾನಕ್ಕೂ ಮುನ್ನ ಈಗಾಗಲೇ 199 ಕ್ಕೂ ಹೆಚ್ಚು ಗೂಂಡಾಗಳನ್ನು ಬಂಧಿಸಲಾಗಿದೆ.














