ಮನೆ ರಾಜ್ಯ ಮೈಸೂರು, ಮಂಡ್ಯ, ಬೆಂಗಳೂರಿಗೆ ಹೆಚ್ಚುವರಿ ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆಗೆ ಸಿದ್ಧತೆ..!

ಮೈಸೂರು, ಮಂಡ್ಯ, ಬೆಂಗಳೂರಿಗೆ ಹೆಚ್ಚುವರಿ ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆಗೆ ಸಿದ್ಧತೆ..!

0

ಮೈಸೂರು/ಮಂಡ್ಯ/ಬೆಂಗಳೂರು : ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗಾಗಿ ಹೆಚ್ಚುವರಿ 70 ಟಿಎಂಸಿ ನೀರನ್ನು ರಾಜ್ಯಕ್ಕೆ ನೀಡುವಂತೆ ಕೋರಿ ಮುಂದಿನ ತಿಂಗಳು ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸುವುದಾಗಿ ಕಾವೇರಿ ನದಿ ರಕ್ಷಣಾ ಸಮಿತಿ ತಿಳಿಸಿದೆ. ಅದಕ್ಕೂ ಮುನ್ನ ಏ.27 ರಿಂದ 29 ರವರೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ, ದಾಖಲೆ ಸಂಗ್ರಹಿಸುವುದಾಗಿ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್‌.ಕೆ.ರಾಮು, ‘‘ ಈ ಬಾರಿ ಬೇಸಿಗೆ ಬಿರುಸಾಗಿದೆ. ಮುಂದೆ ಮುಂಗಾರು ಕೂಡ ದುರ್ಬಲವಾಗುವ ಮಾಹಿತಿಯಿದೆ. 2023ರಲ್ಲಿ ಇದೇ ರೀತಿ ಪರಿಸ್ಥಿತಿಯಿಂದ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಬೆಳೆ ಬೆಳೆಯುವುದು ಹೋಗಲಿ, ಜನ ಜಾನುವಾರುಗಳಿಗೂ ನೀರಿಲ್ಲದೆ ಕಷ್ಟವಾಗಿತ್ತು. ರಾಜ್ಯದ ಕಾವೇರಿ ಕೊಳ್ಳದ ಪ್ರದೇಶದಲ್ಲಿ ಈಗ ಹಿಂದಿನ ಪರಿಸ್ಥಿತಿಯಿಲ್ಲ. ಬೆಂಗಳೂರಿಗೆ ನೀರು ಸಾಕಾಗುತ್ತಿಲ್ಲ. ಜನಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗ, ಹಿಂದಿನ ತೀರ್ಪನ್ನು ಮುಂದಿಟ್ಟುಕೊಂಡು ಈಗಲೂ ನೀರು ನೀಡುತ್ತಿರುವುದು ರಾಜ್ಯದ ರೈತರ ಪಾಲಿಗೆ ಕುಣಿಕೆಯಾಗಿ ಪರಿಣಮಿಸಿದೆ,’’ ಎಂದು ಹೇಳಿದರು.

2018ರ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಸದ್ಯ ರಾಜ್ಯಕ್ಕೆ ಸಿಗುತ್ತಿರುವ 284.75 ಟಿಎಂಸಿ ನೀರು ಸಾಲುತ್ತಿಲ್ಲ. ಹೀಗಾಗಿ, ಹೆಚ್ಚುವರಿ 70 ಟಿಎಂಸಿ ನೀರು ನೀಡುವಂತೆ ಆಗ್ರಹಿಸಿ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ತಡೆಯುವಂತೆ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದೇವೆ,’’ ಎಂದು ತಿಳಿಸಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡು ಜಲಾಶಯಗಳ, ರೈತರ ಸಂಕಷ್ಟದ ನೈಜ ಸ್ಥಿತಿಯ ಮಾಹಿತಿ ಸಂಗ್ರಹಿಸಲಿದ್ದೇವೆ. ಏ. 27 ರಂದು ತಲಕಾವೇರಿಯಲ್ಲಿ ಬೆಳಗ್ಗೆ 8.30ಕ್ಕೆ ಪೂಜೆ ಸಲ್ಲಿಸಿ ಅಧ್ಯಯನ ಆರಂಭಿಸಲಾಗುವುದು. ಅಂದು ಹಾರಂಗಿ ಡ್ಯಾಂ, ಹೇಮಾವತಿ ಡ್ಯಾಂ ವೀಕ್ಷಣೆ ಮಾಡಿ ಸ್ಥಳೀಯ ರೈತರು, ಕಾರ್ಮಿಕರ ಜತೆಗೆ ಸಮಾಲೋಚನೆ ನಡೆಸಲಿದ್ದೇವೆ.

ಏ. 28 ರಂದು ಕೆಆರ್‌ಎಸ್‌ ಡ್ಯಾಂ ಪರಿಶೀಲಿಸಿ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್‌. ಗೋಪಾಲಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಕಾವೇರಿ ಕೊಳ್ಳದ ಶಾಸಕರು, ಸಂಸದರು, ನೀರಾವರಿ ತಜ್ಞರು ಹಾಗೂ ಕಾನೂನು ತಜ್ಞರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಏ. 29ರಂದು ಕಬಿನಿ, ನಂಜನಗೂಡು, ಟಿ. ನರಸೀಪುರದಲ್ಲಿ ತಿರುಗಾಡಿ ಮೇಕೆದಾಟು ಬಳಿ ಸಭೆ ನಡೆಸಲಾಗುವುದು,’’ ಎಂದು ಹೇಳಿದರು.

‘‘ಈ ಮಾಹಿತಿ, ವರದಿಗಳನ್ನು ಮುಂದಿಟ್ಟುಕೊಂಡು ಕಾನೂನು ಹೋರಾಟ ಕೈಗೊಳ್ಳಲಾಗುವುದು. ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ, ಮಾಜಿ ಐಎಎಸ್‌ ಅಧಿಕಾರಿ ಟಿ.ತಿಮ್ಮೇಗೌಡ, ನಿವೃತ್ತ ಐಪಿಎಸ್‌ ಅಧಿಕಾರಿ ಮುನಿಕೃಷ್ಣ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ಶ್ರೀಕಂಠಯ್ಯ , ಮಾಜಿ ಎಂಎಲ್‌ಸಿ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ,’’ ಎಂದರು.