ಮನೆ ಸುದ್ದಿ ಜಾಲ 152ರ ಪೈಕಿ 110ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು-ಬಿಜೆಪಿಗೆ ಅಧಿಕಾರ: ಅಮಿತ್‌ ಶಾ ವಿಶ್ವಾಸ

152ರ ಪೈಕಿ 110ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು-ಬಿಜೆಪಿಗೆ ಅಧಿಕಾರ: ಅಮಿತ್‌ ಶಾ ವಿಶ್ವಾಸ

0

ಕೋಲ್ಕತ್ತಾ : ಮೊದಲ ಹಂತದ ಚುನಾವಣೆ ನಡೆದ 152 ಸ್ಥಾನಗಳಲ್ಲಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ನಡೆದ ಬಳಿಕ ಇಂದು(ಏ.24) ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ದಾಖಲಾದ ಸುಮಾರು 92.7% ರಿಂದ 92.88% ರಷ್ಟು ದಾಖಲೆ ಮತದಾನವು ರಾಜ್ಯದಲ್ಲಿ ಪರಿವರ್ತನೆಯ ಸ್ಪಷ್ಟ ಸಂಕೇತ ಮತ್ತು ಬಿಜೆಪಿಗೆ ಪೂರಕವಾದ ಜನಾದೇಶವಾಗಿದೆ ಎಂದು ಅವರು ಬಣ್ಣಿಸಿದರು.

ಈ ಬಾರಿ ಪ್ರಚಂಡ ಬಹುಮತದಿಂದ ಬಿಜೆಪಿ ಗೆಲ್ಲಲಿದೆ. ‘ಭಯ’ ನಿರ್ಗಮಿಸಲಿದೆ, ‘ಭರವಸೆ’ ಆಗಮಿಸಲಿದೆ. ಬಂಗಾಳ ಅಭಿವೃದ್ಧಿಯನ್ನು ಆಯ್ಕೆ ಮಾಡಿದೆ. ಮೊದಲ ಹಂತದ ಈ ಮುನ್ನಡೆಯ ಆಧಾರದ ಮೇಲೆ, ಎರಡನೇ ಹಂತದ ಮತದಾನ ಮುಗಿಯುವ ಹೊತ್ತಿಗೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ಸಿದ್ಧವಾಗಲಿದೆ ಎಂದು ಹೇಳಿದರು. ಏ.29ರಂದು 142 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 294 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಒಟ್ಟು 170 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ.

ಮೊದಲ ಹಂತದ ಮತದಾನದ ಮೂಲಕ ಜನರು “ಭಯದಿಂದ ನಂಬಿಕೆಯತ್ತ” ಪ್ರಯಾಣ ಬೆಳೆಸಿದ್ದಾರೆ. ಇದೇ ಹಾದಿಯನ್ನು ಎರಡನೇ ಹಂತದ ಮತದಾರರು ಮುಂದುವರಿಸಲಿದ್ದಾರೆ. ಬಂಗಾಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ಪ್ರಾಣಾಪಾಯವಿಲ್ಲದೆ ಅತ್ಯಂತ ಶಾಂತಿಯುತವಾಗಿ ಚುನಾವಣೆ ನಡೆದಿದೆ ಎಂದು ಹೇಳುತ್ತಾ, ಇದಕ್ಕೆ ಸಹಕರಿಸಿದ ಚುನಾವಣಾ ಆಯೋಗ ಮತ್ತು ಭದ್ರತಾ ಪಡೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಮೊದಲ ಎರಡು ಹಂತಗಳ ನಂತರವೇ ಬಿಜೆಪಿ ಪೂರ್ಣ ಬಹುಮತದತ್ತ ಸಾಗಲಿದೆ. ದೀದಿ ಹೋಗಲಿದ್ದಾರೆ, ಬಿಜೆಪಿ ಬರಲಿದೆ” (Didi jaane waali hai, BJP aane waali hai) ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ಅವರ ಆಡಳಿತ ಕೊನೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಹೊರಗಿನವರಲ್ಲ, ಬದಲಿಗೆ ಬಂಗಾಳದ ಮಣ್ಣಿನ ಮಗನೇ ಆಗಿರುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರನ್ನು ಆಯ್ದು ಹೊರಹಾಕಲಾಗುವುದು ಮತ್ತು ಗಡಿಯ ಮೂಲಕ ಒಂದು ಅಕ್ರಮ ಹಕ್ಕಿಯೂ ಹಾರದಂತೆ ಅತೀ ಕಟ್ಟುನಿಟ್ಟಿನ ನೀತಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ.