ಮನೆ ಸುದ್ದಿ ಜಾಲ ಬ್ಯಾಟ್ ಸಿಲುಕಿದ ಪರಿಣಾಮ ರನೌಟ್: ಟೀಮ್ ಇಂಡಿಯಾ ಆಟಗಾರನ ವಿಚಿತ್ರ ವಿಕೆಟ್!

ಬ್ಯಾಟ್ ಸಿಲುಕಿದ ಪರಿಣಾಮ ರನೌಟ್: ಟೀಮ್ ಇಂಡಿಯಾ ಆಟಗಾರನ ವಿಚಿತ್ರ ವಿಕೆಟ್!

0

ಕ್ರಿಕೆಟ್ ಪಂದ್ಯಗಳಲ್ಲಿ ರನೌಟ್ ಸಾಮಾನ್ಯವಾಗಿ ಕಂಡುಬರುವ ಘಟನೆ. ಆದರೆ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಔಟಾದ ರೀತಿ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿಕೆಟ್ ಕೀಪರ್ ಕಾಲಿನ ಬಳಿ ಬ್ಯಾಟ್ ಸಿಲುಕಿಕೊಂಡ ಪರಿಣಾಮ ಕ್ರೀಸ್ ತಲುಪಲು ಸಾಧ್ಯವಾಗದೇ ಅವರು ಅಪರೂಪದ ರೀತಿಯಲ್ಲಿ ವಿಕೆಟ್ ಕಳೆದುಕೊಂಡಿದ್ದಾರೆ.

ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ’ ತಂಡದ ಪರ ಪ್ರಿಯಾಂಶ್ ಆರ್ಯ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.

ಭಾರತದ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ ಲಾಂಗ್-ಆಫ್ ದಿಕ್ಕಿಗೆ ಚೆಂಡು ಹೊಡೆದು ಎರಡನೇ ರನ್‌ಗೆ ಕರೆ ನೀಡಿದರು. ಆದರೆ ಪ್ರಿಯಾಂಶ್ ಆರ್ಯ ಆರಂಭದಲ್ಲಿ ಓಡಲು ಹಿಂಜರಿದ ಕಾರಣ ಗೊಂದಲ ಉಂಟಾಯಿತು. ಅಷ್ಟರಲ್ಲಾಗಲೇ ಗಾಯಕ್ವಾಡ್ ಪಿಚ್‌ನ ಮಧ್ಯಭಾಗ ದಾಟಿ ವೇಗವಾಗಿ ಓಡಿಬಂದಿದ್ದರು.

ಈ ಪರಿಸ್ಥಿತಿಯಲ್ಲಿ ರನೌಟ್ ತಪ್ಪಿಸಿಕೊಳ್ಳಲು ಇಬ್ಬರೂ ಬ್ಯಾಟರ್‌ಗಳು ಒಂದೇ ತುದಿಯ ಕ್ರೀಸ್‌ ಕಡೆಗೆ ಓಡಿದರು.

ವಿಚಿತ್ರವಾಗಿ ವಿಕೆಟ್ ಕಳೆದುಕೊಂಡ ಆರ್ಯ

ಸ್ಟ್ರೈಕರ್ ಎಂಡ್‌ನಲ್ಲಿದ್ದ ಪ್ರಿಯಾಂಶ್ ಆರ್ಯ ತಿರುಗಿ ಕ್ರೀಸ್‌ಗೆ ಬ್ಯಾಟ್ ತಲುಪಿಸಲು ಯತ್ನಿಸಿದ ವೇಳೆ, ಚೆಂಡು ಹಿಡಿಯಲು ನಿಂತಿದ್ದ ಶ್ರೀಲಂಕಾ ತಂಡದ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಅವರ ಕಾಲಿನ ಬಳಿ ಬ್ಯಾಟ್ ಸಿಲುಕಿಕೊಂಡಿತು.

ಡಿಕ್ವೆಲ್ಲಾ ಅವರ ಕಾಲು ಅಡ್ಡ ಬಂದ ಪರಿಣಾಮ ಆರ್ಯ ಅವರಿಗೆ ಬ್ಯಾಟ್ ಅನ್ನು ಕ್ರೀಸ್ ಗೆರೆಯೊಳಗೆ ತಳ್ಳಲು ಸಾಧ್ಯವಾಗಲಿಲ್ಲ. ಇದೇ ವೇಳೆ ರುತುರಾಜ್ ಗಾಯಕ್ವಾಡ್ ಮೊದಲು ಕ್ರೀಸ್ ತಲುಪಿ ಸುರಕ್ಷಿತರಾದರು. ತಕ್ಷಣ ಎಚ್ಚೆತ್ತ ಡಿಕ್ವೆಲ್ಲಾ ಚೆಂಡನ್ನು ನಾನ್-ಸ್ಟ್ರೈಕರ್ ಎಂಡ್‌ಗೆ ಎಸೆದಿದ್ದು, ಸ್ಟಂಪ್‌ಗಳನ್ನು ಉರುಳಿಸಿದರು.

ಮೂರನೇ ಅಂಪೈರ್ ತೀರ್ಪಿನ ಬಳಿಕ ಚರ್ಚೆ

ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದ ಮೂರನೇ ಅಂಪೈರ್, ಇಬ್ಬರೂ ಬ್ಯಾಟರ್‌ಗಳು ಒಂದೇ ಕ್ರೀಸ್‌ಗೆ ಓಡಿ ಬಂದ ಸಂದರ್ಭದಲ್ಲಿ ಗಾಯಕ್ವಾಡ್ ಮೊದಲಿಗೆ ಕ್ರೀಸ್ ತಲುಪಿರುವುದು ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ನಿಯಮದ ಪ್ರಕಾರ 32 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಎಂದು ಘೋಷಿಸಲಾಯಿತು.

ಆದರೆ ಈ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವಿಕೆಟ್ ಕೀಪರ್ ಕಾಲಿನ ಅಡ್ಡಿಯಿಂದ ಬ್ಯಾಟ್ ಕ್ರೀಸ್ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಇದು ಎಂಸಿಸಿ ನಿಯಮ 37ರ ಅಡಿಯಲ್ಲಿ ಫೀಲ್ಡಿಂಗ್ ಅಥವಾ ಬ್ಯಾಟಿಂಗ್‌ಗೆ ಅಡ್ಡಿಪಡಿಸಿದ ಪ್ರಕರಣವೆಂದು ಪರಿಗಣಿಸಬೇಕಿತ್ತು ಎಂಬ ವಾದವನ್ನು ಅನೇಕ ಅಭಿಮಾನಿಗಳು ಮುಂದಿಟ್ಟಿದ್ದಾರೆ.

ಆದಾಗ್ಯೂ ಡಿಕ್ವೆಲ್ಲಾ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿಲ್ಲ, ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಅಂಪೈರ್‌ಗಳು ಪರಿಗಣಿಸಿದ ಕಾರಣ ಪ್ರಿಯಾಂಶ್ ಆರ್ಯ ಪೆವಿಲಿಯನ್‌ಗೆ ಮರಳಬೇಕಾಯಿತು. ಈ ಅಪರೂಪದ ಘಟನೆಯ ನಡುವೆಯೂ ಭಾರತ ‘ಎ’ ತಂಡ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿತು.