ಮನೆ ಸುದ್ದಿ ಜಾಲ ವಿಚ್ಛೇದನ ವದಂತಿಗಳ ಬಗ್ಗೆ ಮೌನ ಮುರಿದ ನಟಿ ಶುಭಾ ಪೂಂಜಾ

ವಿಚ್ಛೇದನ ವದಂತಿಗಳ ಬಗ್ಗೆ ಮೌನ ಮುರಿದ ನಟಿ ಶುಭಾ ಪೂಂಜಾ

0

ಕನ್ನಡ ಚಿತ್ರರಂಗದ ನಟಿ ಶುಭಾ ಪೂಂಜಾ ಅವರು ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವಿಚ್ಛೇದನ ವದಂತಿಗಳ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ಮಾಧ್ಯಮಗಳಲ್ಲಿ ಅವರ ವಿಚ್ಛೇದನದ ಕುರಿತು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದವು. ಈ ಬೆಳವಣಿಗೆಗಳ ನಡುವೆ ಶುಭಾ ಪೂಂಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ಮಾಧ್ಯಮ ಪ್ರತಿನಿಧಿಗಳು ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಶುಭಾ ಪೂಂಜಾ ಅವರು 2022ರಲ್ಲಿ ತಮ್ಮ ಬಹುಕಾಲದ ಗೆಳೆಯ ಸುಮಂತ್ ಬಿಲ್ಲವ್ ಅವರನ್ನು ವಿವಾಹವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಇಬ್ಬರೂ ವಿಚ್ಛೇದನದತ್ತ ಹೆಜ್ಜೆ ಇಡಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದವು. ಇದೇ ವೇಳೆ ಪತಿಯೊಂದಿಗೆ ಇರುವ ಕೆಲವು ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದೂ ಚರ್ಚೆಗೆ ಕಾರಣವಾಗಿತ್ತು. ಆದರೆ ವಿಚ್ಛೇದನದ ಬಗ್ಗೆ ನೇರವಾಗಿ ಯಾವುದೇ ಸ್ಪಷ್ಟನೆ ನೀಡದ ಅವರು, ತಮ್ಮ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

‘ನನ್ನ ಆತ್ಮೀಯ ಮಾಧ್ಯಮ ಮಿತ್ರರೇ, ನನ್ನ ಸಂಪೂರ್ಣ ಚಿತ್ರರಂಗದ ಪಯಣದಲ್ಲಿ ನೀವು ನನಗೆ ನೀಡಿರುವ ಬೆಂಬಲ, ಪ್ರೋತ್ಸಾಹ ಹಾಗೂ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಇಂದು ನಿಮ್ಮಲ್ಲಿ ಒಂದು ವಿನಮ್ರ ಮನವಿ ಮಾಡಿಕೊಳ್ಳಲು ಬಯಸುತ್ತೇನೆ. ದಯವಿಟ್ಟು ನನಗೆ, ಸುಮಂತ್ ಅವರಿಗೆ ಹಾಗೂ ನಮ್ಮ ಕುಟುಂಬದವರಿಗೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸ್ವಲ್ಪ ಖಾಸಗಿತನ ನೀಡಿ. ಈ ಸವಾಲಿನ ಸಮಯದಲ್ಲಿ ನಿಮ್ಮ ಗೌರವ ಮತ್ತು ತಿಳುವಳಿಕೆ ನಮಗೆ ಬಹಳ ಮುಖ್ಯ’ ಎಂದು ಅವರು ಬರೆದುಕೊಂಡಿದ್ದಾರೆ.

‘ಸೂಕ್ತ ಸಮಯ ಬಂದಾಗ, ಯಾವುದೇ ಬೆಳವಣಿಗೆ ಇದ್ದರೆ ಅದನ್ನು ನಾನು ಸ್ವತಃ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ನಿರಂತರ ಪ್ರೀತಿ, ಬೆಂಬಲ ಮತ್ತು ಕಾಳಜಿಗೆ ಮತ್ತೊಮ್ಮೆ ಧನ್ಯವಾದಗಳು’ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಶುಭಾ ಪೂಂಜಾ ಹಂಚಿಕೊಂಡಿರುವ ಈ ಪೋಸ್ಟ್ ಅವರ ವೈಯಕ್ತಿಕ ಬದುಕಿನಲ್ಲಿ ಕೆಲವು ಬೆಳವಣಿಗೆಗಳು ನಡೆಯುತ್ತಿರುವ ಸೂಚನೆ ನೀಡಿದಂತಿದೆ. ಆದರೆ ಮುಂದಿನ ದಿನಗಳಲ್ಲಿ ತಾವೇ ಅಧಿಕೃತ ಮಾಹಿತಿ ನೀಡುವುದಾಗಿ ಹೇಳಿರುವ ಕಾರಣ, ಈ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ಸದ್ಯ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.