ಮನೆ ಸುದ್ದಿ ಜಾಲ ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಇಟಿಎಂ – ಡೈನಾಮಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ, ಮಾತ್ರ ಟಿಕೆಟ್...

ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಇಟಿಎಂ – ಡೈನಾಮಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ, ಮಾತ್ರ ಟಿಕೆಟ್ ಜನರೇಟ್

0

ಬೆಂಗಳೂರು : ಬೆಂಗಳೂರಿಗರ ನೆಚ್ಚಿನ ಸಾರಿಗೆ ಎಂದರೆ ಅದು ನಮ್ಮ ಬಿಎಂಟಿಸಿ. ಬಿಎಂಟಿಸಿಯಲ್ಲಿ ಈ ಹಿಂದೆ ಕಂಡೆಕ್ಟರ್‌ಗಳ ಯುಪಿಐ ಕಳ್ಳಾಟ ಬಯಲಾಗಿತ್ತು. ಇದೀಗ ಕಳ್ಳಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಡೈನಾಮಿಕ್ ಕ್ಯೂಆರ್ ಕೋಡ್ ಆಧಾರಿತ ಹೊಸ ಇಟಿಎಂ ಮಿಷನ್‌ಗಳನ್ನು ಇಲಾಖೆ ಪರಿಚಯಿಸುತ್ತಿದೆ. ಮುಂದಿನ ತಿಂಗಳಾಂತ್ಯಕ್ಕೆ ಎಲ್ಲಾ ಬಸ್‌ಗಳಲ್ಲಿಯೂ ಈ ಹೊಸ ಇಟಿಎಂಗಳು ಲಭ್ಯವಾಗಲಿವೆ.

ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಂಡೆಕ್ಟರ್‌ಗಳ ಕರಾಮತ್ತು ಹೆಚ್ಚಾಗಿದೆ. ತಮ್ಮ ಸ್ವಂತ ಯುಪಿಐ ಸ್ಕ್ಯಾನರ್ ನೀಡಿ ಜನರ ಟಿಕೆಟ್ ಹಣ ವಂಚಿಸಿದ್ದು ಬಟಾಬಯಲಾಗಿದೆ. ಇಂತಹ ಫೇಕ್ ಟಿಕೆಟ್ ಮನಿ ಟ್ರಾನ್ಸ್ಫರ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಎಂಟಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಸುಮಾರು 11 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ.

ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಮುಂಬೈ ಮೂಲದ ಚಲೋ ಅನ್ನೋ ಕಂಪನಿಗೆ ಟೆಂಡರ್ ನೀಡಲಾಗಿದೆ. ಈ ಕಂಪನಿಯು ಸದ್ಯ 400 ಇಟಿಎಂ ಅಂದರೆ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷನ್‌ಗಳ ಪೈಲೆಟ್ ಟ್ರಯಲ್ ಅನ್ನು ನಡೆಸಲಾಗುತ್ತಿದೆ. ಯಶವಂತಪುರ ಡಿಪೋ ಸೇರಿದಂತೆ ಹತ್ತು ರೂಟ್‌ಗಳಲ್ಲಿ ಟ್ರಯಲ್ ನಡೆಸುತ್ತಿದೆ. ಟ್ರಯಲ್ ಕಾರ್ಯ ಮುಕ್ತಾಯದ ಹಂತ ತಲುಪಿದ್ದು, ಮೇ 30ರಿಂದ ಬಿಎಂಟಿಸಿಯ ಆರು ಸಾವಿರಕ್ಕೂ ಹೆಚ್ಚು ಬಸ್‌ಗಳಲ್ಲಿ ಇಟಿಎಂಗಳು ಲಭ್ಯವಾಗಲಿದೆ.

ಇಟಿಎಂಗಳು ಬಂದ ನಂತರ ಬಸ್‌ಗಳಲ್ಲಿ ಅಂಟಿಸಿರೋ ಎಲ್ಲಾ ಕ್ಯೂಆರ್ ಕೋಡ್ ತೆಗೆದು ಹಾಕಲಾಗುತ್ತಿದ್ದು, ಈ ಆಂಡ್ರಾಯ್ಡ್ ಸೌಲಭ್ಯದ ಇಟಿಎಂನಲ್ಲಿ ಅಳವಡಿಸಿರುವ ಡೈನಾಮಿಕ್ ಕ್ಯೂಆರ್ ಕೋಡ್ ಸ್ಕ್ಯಾನರ್ ಮಾಡಿದರೆ ಮಾತ್ರ ಟಿಕೆಟ್ ಜನರೇಟ್ ಆಗಲಿದೆಯಂತೆ. ಇದರಿಂದ ಪ್ರಯಾಣಿಕರು ಹಾಗೂ ಕಂಡೆಕ್ಟರ್‌ಗಳ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ.

ಜೊತೆಗೆ ಮುಂದಿನ ದಿನಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎನ್‌ಸಿಎಂಸಿ ಬಳಸಿ ಹಣ ಪಾವತಿಸುವ ಅವಕಾಶವನ್ನು ನೀಡಲಾಗುತ್ತಿದೆ. ಇದರಿಂದ ಟಿಕೆಟ್ ವೇಗವಾಗಿ ನೀಡಬಹುದಾಗಿದೆ. ಈ ಹೊಸ ಇಟಿಎಂಗಳ ಟ್ರಯಲ್ ಯಶಸ್ವಿಯಾಗುತ್ತಿದ್ದು, ಸಣ್ಣಪುಟ್ಟ ಲೋಪದೋಷ ಸರಿಪಡಿಸಿಕೊಂಡು ಮುಂದಿನ ತಿಂಗಳಾಂತ್ಯಕ್ಕೆ ಎಲ್ಲಾ ಬಸ್‌ಗಳಲ್ಲಿಯೂ ಹೊಸ ಸ್ಮಾರ್ಟ್ ಇಟಿಎಂಗಳನ್ನು ಜಾರಿಗೆ ತರಲು ಬಿಎಂಟಿಸಿ ಪ್ಲಾನ್ ಮಾಡಿದೆ.