ಮನೆ ರಾಜ್ಯ ಗ್ರೇಟರ್ ಬೆಂಗಳೂರು ಚುನಾವಣೆಗೆ ದುಡ್ಡಿಲ್ಲ – ಸುಪ್ರೀಂಗೆ GBA ಅಳಲು

ಗ್ರೇಟರ್ ಬೆಂಗಳೂರು ಚುನಾವಣೆಗೆ ದುಡ್ಡಿಲ್ಲ – ಸುಪ್ರೀಂಗೆ GBA ಅಳಲು

0

ಬೆಂಗಳೂರು : ರಾಜ್ಯ ರಾಜಧಾನಿಯ ಆಡಳಿತಾತ್ಮಕ ಬದಲಾವಣೆಯ ನಂತರ ಕುತೂಹಲ ಕೆರಳಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ನಗರ ಪಾಲಿಕೆಗಳ ಚುನಾವಣೆಗೆ ಈಗ ಗ್ರಹಣ ಹಿಡಿದಿದೆ. ಜೂನ್ 30ರೊಳಗೆ ಚುನಾವಣೆ ನಡೆಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ ಎಂದು ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಅಳಲು ತೋಡಿಕೊಂಡಿದೆ.

ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಚುನಾವಣಾ ಪ್ರಕ್ರಿಯೆ ನಡೆಸಲು ಆಯೋಗದ ಬಳಿ ಹಣದ ಕೊರತೆ ಎದುರಾಗಿದೆ. ಇದರ ಜೊತೆಗೆ, ಬೃಹತ್ ಮಟ್ಟದ ಮತದಾನ ಪ್ರಕ್ರಿಯೆ ನಿಭಾಯಿಸಲು ಅಗತ್ಯವಿರುವ ಸಿಬ್ಬಂದಿ ಬಲವೂ ಇಲ್ಲದಿರುವುದು ಆಯೋಗವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಕ್ರಿಯ ಬೆಂಬಲ ಮತ್ತು ಅನುದಾನ ಅತ್ಯಗತ್ಯ ಎಂದು ಆಯೋಗ ತಿಳಿಸಿದೆ.

ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಜನಗಣತಿ ಕಾರ್ಯವು ಮೇ 15ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜನಗಣತಿ ಕಾರ್ಯದಲ್ಲಿ ಬಹುತೇಕ ಸರ್ಕಾರಿ ಸಿಬ್ಬಂದಿ ತೊಡಗಿರುವುದರಿಂದ ಅದು ಮುಗಿಯುವವರೆಗೆ ಚುನಾವಣಾ ಕೆಲಸಗಳಿಗೆ ಸಿಬ್ಬಂದಿ ನಿಯೋಜನೆ ಕಷ್ಟಸಾಧ್ಯವಾಗಿದೆ. ಹೀಗಾಗಿ ಮೇ 15ರ ನಂತರವಷ್ಟೇ ಐದು ಪಾಲಿಕೆಗಳ ಚುನಾವಣಾ ಪೂರ್ವಸಿದ್ಧತೆಗಳನ್ನು ಆರಂಭಿಸಲು ಆಯೋಗ ನಿರ್ಧರಿಸಿದೆ.

ಬೆಂಗಳೂರು ನಗರ ಪಾಲಿಕೆ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 2026ರ ಜನವರಿ 12ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಜೂನ್ 30ರೊಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿತ್ತು. ಆದರೆ ಈಗ ಎದುರಾಗಿರುವ ತಾಂತ್ರಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಈ ಗಡುವಿನೊಳಗೆ ಚುನಾವಣೆ ಮುಗಿಸುವುದು ಆಯೋಗಕ್ಕೆ ಸವಾಲಾಗಿ ಪರಿಣಮಿಸಿದೆ.

ಸರ್ಕಾರದ ಆರ್ಥಿಕ ನೆರವು ಮತ್ತು ಸಿಬ್ಬಂದಿ ನಿಯೋಜನೆಯಲ್ಲಿ ವಿಳಂಬವಾದರೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮತದಾರರು ಜನಪ್ರತಿನಿಧಿಗಳ ಆಯ್ಕೆಗಾಗಿ ಇನ್ನೂ ಕೆಲವು ತಿಂಗಳು ಕಾಯುವುದು ಅನಿವಾರ್ಯವಾಗಲಿದೆ.