ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ದಾಖಲೆ ಮಟ್ಟದಲ್ಲಿ ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದ ಬಗ್ಗೆ ಮಾಜಿ ಸಚಿವ ಹೆಚ್. ವಿಶ್ವನಾಥ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಲಾಗಿದೆ ಎಂಬ ಆರೋಪವನ್ನು ಅವರು ಹೊರಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತೀವ್ರ ಪ್ರತಿಕ್ರಿಯೆ ನೀಡಿದ್ದು, ಈ ಹೇಳಿಕೆಯನ್ನು ನಾಡಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಮಾಡಿದ ಉದ್ದೇಶಪೂರ್ವಕ ಅವಮಾನ ಎಂದು ಹೇಳಿದ್ದಾರೆ.“ರಾಜ್ಯದ ಮಕ್ಕಳು ತಮ್ಮ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಉತ್ತಮ ಫಲಿತಾಂಶ ಸಾಧಿಸಿದ್ದಾರೆ. ಅವರ ಸಾಧನೆಯನ್ನು ಅನುಮಾನ ದೃಷ್ಟಿಯಿಂದ ನೋಡುವುದು ಸರಿಯಲ್ಲ,” ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ, ಪರೀಕ್ಷಾ ಕೊಠಡಿಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳಿಸಿರುವುದನ್ನು ಉಲ್ಲೇಖಿಸಿದ ಅವರು, “ಕ್ಯಾಮೆರಾ ಕಣ್ಗಾವಲಿನ ನಡುವೆ ನಕಲು ನಡೆಯುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಈ ಮಾದರಿ ವ್ಯವಸ್ಥೆಯನ್ನು ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಸಹ ಅನುಸರಿಸಿದ್ದು, ವೆಬ್ ಕ್ಯಾಸ್ಟಿಂಗ್ ಮತ್ತು ಎರಡು ಬಾರಿ ಪರೀಕ್ಷೆ ನಡೆಸುವ ಕ್ರಮವನ್ನು ಅಳವಡಿಸಿಕೊಂಡಿದೆ ಎಂದು ಅವರು ವಿವರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ತೇರ್ಗಡೆ ಅಂಕಗಳನ್ನು 35ರಿಂದ 33ಕ್ಕೆ ಇಳಿಸಿರುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಜಾರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
“ಈ ಬಾರಿ ಶೇಕಡಾ 33 ಅಂಕಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 0.14 ಶೇಕಡಾ ಮಾತ್ರ. ಇದನ್ನು ದೊಡ್ಡ ವಿಷಯವಾಗಿ ಬಿಂಬಿಸುವುದು ಸರಿಯಲ್ಲ. ಕೇರಳದಲ್ಲಿ 30 ಅಂಕಗಳಿದ್ದರೂ ತೇರ್ಗಡೆ ನೀಡಲಾಗುತ್ತದೆ,” ಎಂದು ಅವರು ಹೇಳಿದರು.
ಮಕ್ಕಳ ಸಾಧನೆಯನ್ನು ಅಪಮಾನಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಸಿದ ಸಚಿವರು, ಮಾಹಿತಿಯ ಕೊರತೆಯಿಂದ ಫಲಿತಾಂಶವನ್ನು ಅನುಮಾನಿಸುವುದು ವಿದ್ಯಾರ್ಥಿಗಳ ಮನೋಭಾವನೆಗೆ ಧಕ್ಕೆ ತರುತ್ತದೆ ಎಂದು ಅಭಿಪ್ರಾಯಪಟ್ಟರು.















