ಮನೆ ಸುದ್ದಿ ಜಾಲ ದಿಗ್ಬಂಧನದ ಮಧ್ಯೆ ಹಾರ್ಮೂಜ್‌ ದಾಟಿತು 4,700 ಕೋಟಿ ರೂ. ಮೌಲ್ಯದ ಸೂಪರ್‌ಯಾಚ್‌!

ದಿಗ್ಬಂಧನದ ಮಧ್ಯೆ ಹಾರ್ಮೂಜ್‌ ದಾಟಿತು 4,700 ಕೋಟಿ ರೂ. ಮೌಲ್ಯದ ಸೂಪರ್‌ಯಾಚ್‌!

0



ಮಸ್ಕತ್:
 ರಷ್ಯಾದ ಅತೀ ಶ್ರೀಮಂತ ಉದ್ಯಮಿ ಅಲೆಕ್ಸಿ ಮೊರ್ದಾಶೋವ್ ಅವರಿಗೆ ಸೇರಿದ 500 ಮಿಲಿಯನ್ ಡಾಲರ್‌ (4,712 ಕೋಟಿ ರೂ.) ಮೌಲ್ಯದ ನಾರ್ಡ್ ಹೆಸರಿನ ಸೂಪರ್‌ಯಾಚ್‌ ಇರಾನ್‌ನ ಕಟ್ಟುನಿಟ್ಟಿನ ದಿಗ್ಬಂಧನದ ನಡುವೆಯೂ ಹಾರ್ಮೂಜ್‌ ಜಲಸಂಧಿಯನ್ನು  ಯಶಸ್ವಿಯಾಗಿ ದಾಟಿದೆ.

ಸೂಪರ್‌ಯಾಚ್‌ ದುಬೈನಿಂದ ಶನಿವಾರ (ಏ.25) ಹೊರಟು ಹಾರ್ಮೂಜ್‌ ಜಲಸಂಧಿಯನ್ನು ದಾಟಿ ಭಾನುವಾರ ಬೆಳಿಗ್ಗೆ ಓಮನ್‌ನ ಮಸ್ಕತ್‌ನಲ್ಲಿರುವ ಅಲ್ ಮೌಜ್ ಮರೀನಾವನ್ನು ತಲುಪಿ ಲಂಗರು ಹಾಕಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯಿಂದಾಗಿ ಹಾರ್ಮೂಜ್‌ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ತೀವ್ರ ನಿರ್ಬಂಧ ಹೇರಲಾಗಿದೆ. ಆದರೂ ರಷ್ಯಾ ಮತ್ತು ಇರಾನ್ ನಡುವಿನ ಉತ್ತಮ ಸಂಬಂಧದ ಕಾರಣದಿಂದಾಗಿ ಈ ಯಾಚ್‌ಗೆ ಸುಲಭವಾಗಿ ಹಾದುಹೋಗಲು ಅನುಮತಿ ನೀಡಲಾಗಿದೆ ಎಂದು ವರದಿಯಾಗಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಿಯಂತ್ರಣದಲ್ಲಿರುವ ‘ಸುರಕ್ಷಿತ ಮಾರ್ಗ’ವನ್ನು ಬಳಸಿದೆ. ಈ ಮಾರ್ಗವು ಇರಾನ್ ಕರಾವಳಿಗೆ ಸಮೀಪವಿರುವ ಲಾರಾಕ್ ದ್ವೀಪದ ಮೂಲಕ ಹಾದುಹೋಗುತ್ತದೆ. 

ರಷ್ಯಾ ಮತ್ತು ಇರಾನ್ ರಕ್ಷಣಾ ವಲಯದಲ್ಲಿ ಆಪ್ತ ಮಿತ್ರರಾಷ್ಟ್ರಗಳಾಗಿದ್ದು ಪರಸ್ಪರ ಸಹಕಾರ ನೀಡುತ್ತಿವೆ. ಇದೇ ಕಾರಣಕ್ಕೆ ಇರಾನ್ ತನ್ನ ಜಲಗಡಿ ದಾಟಲು ಈ ಯಾಚ್‌ಗೆ ಅನುಮತಿ ನೀಡಿದೆ.

ಜರ್ಮನಿಯ ಲುರ್ಸೆನ್ ಕಂಪನಿ ನಿರ್ಮಿಸಿದ ಈ ಯಾಚ್ 142 ಮೀಟರ್ ಉದ್ದವಿದ್ದು, ವಿಶ್ವದ 14ನೇ ಅತೀ ದೊಡ್ಡ ಯಾಚ್ ಆಗಿದೆ. ಇದರಲ್ಲಿ 20 ಐಷಾರಾಮಿ ಕೊಠಡಿಗಳು, ಈಜುಕೊಳ, ಜಿಮ್, ಸ್ಪಾ, ಸಿನಿಮಾ ಥಿಯೇಟರ್ ಮತ್ತು ಎರಡು ಹೆಲಿಪ್ಯಾಡ್‌ಗಳಿವೆ.

ಅಲೆಕ್ಸಿ ಮೊರ್ದಾಶೋವ್ ಯಾರು?

ರಷ್ಯಾದ ಅತೀ ದೊಡ್ಡ ಉಕ್ಕು ಮತ್ತು ಗಣಿಗಾರಿಕೆ ಕಂಪನಿಯಾದ ಸೆವೆರ್ಸ್ಟಾಲ್ ಮತ್ತು ಬೃಹತ್ ಚಿನ್ನದ ಗಣಿಗಾರಿಕೆ ಕಂಪನಿ ನಾರ್ಡ್‌ಗೋಲ್ಡ್ ಮಾಲೀಕ ಹಾಗೂ ಪುಟಿನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ಉದ್ಯಮಿಯಾಗಿದ್ದಾರೆ. ಇವರ ನಿವ್ವಳ ಆಸ್ತಿ ಮೌಲ್ಯ ಸುಮಾರು 37 ಬಿಲಿಯನ್ ಡಾಲರ್‌ (ಸುಮಾರು 3.1 ಲಕ್ಷ ಕೋಟಿ ರೂ.) ಆಗಿದ್ದು ಪ್ರಸ್ತುತ ರಷ್ಯಾದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಅಮೆರಿಕ, ಬ್ರಿಟನ್ ಮತ್ತು ಯುರೋಪ್ ಒಕ್ಕೂಟಗಳು ಇವರ ಮೇಲೆ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಹೇರಿ ಆಸ್ತಿಗಳನ್ನು ಜಪ್ತಿ ಮಾಡಲು ಆದೇಶಿಸಿದ್ದವು. ಈ ಕಾರಣದಿಂದಲೇ ಅವರ ಈ ಸೂಪರ್‌ಯಾಚ್ ಅಂತರಾಷ್ಟ್ರೀಯ ಜಲಗಡಿಗಳಲ್ಲಿ ಜಪ್ತಿಯಾಗದಂತೆ ಸುರಕ್ಷಿತ ಮಾರ್ಗಗಳನ್ನು ಹುಡುಕುತ್ತಾ ಪ್ರಯಾಣಿಸುತ್ತಿರುತ್ತದೆ.