ಮನೆ ರಾಜ್ಯ ನೀರಿನ ಹಾಹಾಕಾರ – ಗ್ರಾ.ಪಂ ಕಚೇರಿಗೆ ಖಾಲಿ ಕೊಡ, ಜಾನುವಾರುಗಳೊಂದಿಗೆ ಮುತ್ತಿಗೆ..!

ನೀರಿನ ಹಾಹಾಕಾರ – ಗ್ರಾ.ಪಂ ಕಚೇರಿಗೆ ಖಾಲಿ ಕೊಡ, ಜಾನುವಾರುಗಳೊಂದಿಗೆ ಮುತ್ತಿಗೆ..!

0

ಗದಗ : ತೀವ್ರ ಬೇಸಿಗೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗದಗ ಜಿಲ್ಲೆಯ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮಸ್ಥರು, ಗ್ರಾಮ ಪಂಚಾಯತ್ ಕಚೇರಿಗೆ ಖಾಲಿ ಕೊಡ ಹಾಗೂ ಜಾನುವಾರುಗಳ ಸಮೇತ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

ಮಲಪ್ರಭಾ ನದಿಯ ಮೂಲಕ ‘ಜಲ ಜೀವನ ಮಿಷನ್’ ಅಡಿಯಲ್ಲಿ ನೀರು ಪೂರೈಕೆಯಾಗಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ ಹಲವು ದಿನಗಳಿಂದ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. 20 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ಆ ನೀರು ಕೂಡ ಅತ್ಯಂತ ಕಲುಷಿತವಾಗಿದೆ. ಈ ಅಶುದ್ಧ ನೀರನ್ನು ಸೇವಿಸಿ ಗ್ರಾಮದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಮನುಷ್ಯರಿಗಷ್ಟೇ ಅಲ್ಲದೆ, ಜಾನುವಾರುಗಳಿಗೂ ಕುಡಿಯಲು ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಇದೇ ಕಾರಣಕ್ಕೆ ಜಾನುವಾರುಗಳನ್ನು ಪಂಚಾಯತ್ ಆವರಣಕ್ಕೆ ಕರೆತಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಗ್ರಾಮದಲ್ಲಿ ಶುದ್ಧ ನೀರಿನ ಘಟಕವಿದ್ದರೂ ಸಹ ಅದು ದುರಸ್ತಿಯಲ್ಲಿರುವುದರಿಂದ ಬಳಕೆಗೆ ಬಾರದಂತಾಗಿದೆ. ಅದನ್ನು ಸರಿಪಡಿಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ದೂರಿದ್ದಾರೆ.

ಬನಹಟ್ಟಿ ಹಾಗೂ ಮೂಗನೂರು ಗ್ರಾಮಸ್ಥರು ಒಗ್ಗೂಡಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪಂಚಾಯತ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. “ನೀರಿನ ಸಮಸ್ಯೆಗೆ ತಕ್ಷಣ ಮುಕ್ತಿ ನೀಡಿ” ಎಂದು ಅಧಿಕಾರಿಗಳಿಗೆ ಅಳಲು ತೋಡಿಕೊಂಡರು. ಶೀಘ್ರದಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.