ಮನೆ ಸುದ್ದಿ ಜಾಲ ಟ್ರಂಪ್ ಘೋಷಣೆ : ಕೊನೆಗೂ ಯುಎಸ್ – ಇರಾನ್ ಶಾಂತಿ ಒಪ್ಪಂದ ̧   ಹಾರ್ಮುಜ್ ಜಲಸಂಧಿ ಮುಕ್ತ

ಟ್ರಂಪ್ ಘೋಷಣೆ : ಕೊನೆಗೂ ಯುಎಸ್ – ಇರಾನ್ ಶಾಂತಿ ಒಪ್ಪಂದ ̧   ಹಾರ್ಮುಜ್ ಜಲಸಂಧಿ ಮುಕ್ತ

0

ವಾಷಿಂಗ್ಟನ್(ಯುಎಸ್ಎ) : ಅಂತೂ 107 ದಿನಗಳ ಅಮೆರಿಕ-ಇರಾನ್ ಯುದ್ಧ ಕೊನೆಗೊಂಡಿದೆ. ಉಭಯ ದೇಶಗಳು ಭಾನುವಾರ ಐತಿಹಾಸಿಕ ಶಾಂತಿ ಒಪ್ಪಂದ ಮಾಡಿಕೊಂಡಿವೆ. ಇದೀಗ ಹಾರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಸಾಮಾಜಿಕ ಜಾಲತಾಣ ಟ್ರುಥ್‌ನಲ್ಲಿ ಘೋಷಿಸಿದ್ದಾರೆ. ‘ಇರಾನ್ ಜತೆಗಿನ ಒಪ್ಪಂದ ಈಗ ಪೂರ್ಣ. ಎಲ್ಲರಿಗೂ ಅಭಿನಂದನೆಗಳು. ಇದು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುತ್ತದೆ. ಇರಾನ್‌ನ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನ ಕೊನೆಗೊಳ್ಳಲಿದೆ. ಮಹತ್ವದ ಒಪ್ಪಂದವು ಇಡೀ ಪ್ರದೇಶಕ್ಕೆ ಶಾಂತಿ ಹಾಗು ಭದ್ರತೆ ನೀಡುತ್ತದೆ’ ಎಂದು ಟ್ರಂಪ್ ತಿಳಿಸಿದ್ದಾರೆ ಎನ್ನಲಾಗಿದೆ.

 ಇದರ ಕುರಿತ್ತಾಗಿ’ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಸ್ಟಾರ್ಟ್ ಮಾಡಿ. ತೈಲ ಹರಿಯಲಿ’ ಎಂದು ಅವರು ಕರೆ ಕೊಟ್ಟಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ, ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಬಿದ್ದ ನಂತರ (ಜೂನ್ 19, ಶುಕ್ರವಾರ) ಹಾರ್ಮುಜ್ ಜಲಸಂಧಿ ಮುಕ್ತವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಶೇಷವೆಂದರೆ, ಟ್ರಂಪ್‌ ಅವರಿಗೆ 80 ವರ್ಷ ತುಂಬಿದ ದಿನದಂದೇ ಈ ಒಪ್ಪಂದ ಅಂತಿಮಗೊಂಡಿದೆ. ಅಮೆರಿಕವು ಇರಾನ್‌ನ ತೈಲ ರಫ್ತು ಕೇಂದ್ರ ಖಾರ್ಗ್ ದ್ವೀಪದ ಮೇಲೆ ಹಿಡಿತ ಸಾಧಿಸುವ ಬೆದರಿಕೆಯನ್ನು ಹಿಂತೆಗೆದುಕೊಂಡಿದೆ. ಮುಂದಿನ 60 ದಿನಗಳ ಅವಧಿಯಲ್ಲಿ ಇರಾನ್‌ನ ಪರಮಾಣು ಪುಷ್ಟೀಕರಣ ಮತ್ತು ಅದರ ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ವಿಲೇವಾರಿ ಮಾಡುವ ಬಗ್ಗೆ ಅಮೆರಿಕ-ಇರಾನ್ ಮಾತುಕತೆ ನಡೆಸಬೇಕೆಂಬ ಅಂಶ ಒಪ್ಪಂದದಲ್ಲಿದೆ.

ಅಮೆರಿಕಇರಾನ್ ಶಾಂತಿ ಒಪ್ಪಂದದ ಪ್ರಮುಖಾಂಶಗಳು:

ಹಾರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತ, ಇರಾನ್ ಯಾವುದೇ ಟೋಲ್ ವಿಧಿಸುವಂತಿಲ್ಲ.

ಇರಾನ್‌ ಬಂದರುಗಳ ಮೇಲಿನ ಅಮೆರಿಕ ನಿರ್ಬಂಧಗಳು 30 ದಿನಗಳೊಳಗೆ ತೆರವು

ಲೆಬನಾನ್ ಒಳಗೊಂಡಂತೆ ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವಂತಿಲ್ಲ.

ಇರಾನ್‌ನ ಪರಮಾಣು ಪುಷ್ಟೀಕರಣ, ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ವಿಲೇವಾರಿ ಬಗ್ಗೆ ಮುಂದಿನ ದಿನಗಳಲ್ಲಿ ಮಾತುಕತೆ

ಅಮೆರಿಕ ಫ್ರೀಜ್ ಮಾಡಿರುವ ಇರಾನ್‌ನ 24 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳ ಬಿಡುಗಡೆ

ಇರಾನ್ ಯಾವುದೇ ಅಣ್ವಸ್ತ್ರ ತಯಾರಿಸುವಂತಿಲ್ಲ.

ಇರಾನ್ ಸುತ್ತಮುತ್ತ ಅಮೆರಿಕ ನಿಯೋಜಿಸಿರುವ ಸೇನೆಯನ್ನು ಹಿಂತೆಗೆದುಕೊಳ್ಳುವುದು.

ಆದರಿಂದ ಯುಎಸ್ ಜತೆಗೆ ಹೊಸದಾಗಿ ಘೋಷಿಸಲಾದ ಒಪ್ಪಂದದಿಂದ ಯುದ್ಧ ತಕ್ಷಣವೇ ಅಂತ್ಯವಾಗಿದೆ ಎಂದು ಇರಾನ್ ಕೂಡಾ ತಿಳಿಸಿದೆ. ಲೆಬನಾನ್ ಒಳಗೊಂಡಂತೆ ಯುದ್ಧಕ್ಕೆ ಶಾಶ್ವತ, ತಕ್ಷಣದ ಮುಕ್ತಾಯವನ್ನು ಘೋಷಿಸಲಾಗಿದೆ ಎಂದು ಅದು ಹೇಳಿದೆ. ಇರಾನ್‌ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ಇಂದು (ಸೋಮವಾರ) ಬೆಳಗ್ಗೆ ಪ್ರತಿಕ್ರಿಯಿಸಿ, “ಅಮೆರಿಕ ವಿರುದ್ಧದ ಯುದ್ಧದಲ್ಲಿ ನಮ್ಮ ದೇಶವು ಮಹಾನ್ ವಿಜಯ ಸಾಧಿಸಿದೆ. ತನ್ನ ದುಷ್ಟ ಗುರಿಗಳನ್ನು ಸಾಧಿಸಲು ದಾಳಿ ಮಾಡಿದ ಶತ್ರುವನ್ನು ಅದರ ಎಲ್ಲಾ ಗುರಿಗಳಲ್ಲಿ ಸೋಲಿಸಿದ್ದೇವೆ. ಇಸ್ಲಾಮಿಕ್ ಗಣರಾಜ್ಯ ಇರಾನ್‌ಗೆ ಯುದ್ಧದಲ್ಲಿ ದೊಡ್ಡ ಗೆಲುವಾಗಿದೆ” ಎಂದು ಹೇಳಿದ್ದಾರೆ. ಒಪ್ಪಂದ ಅಂತಿಮಗೊಳ್ಳುವ ಕೆಲವೇ ಗಂಟೆಗಳ ಮುನ್ನ ಲೆಬನಾನ್‌ನ ಬೈರುತ್‌ನಲ್ಲಿರುವ ಹೆಜ್ಬೊಲ್ಲಾ ಉಗ್ರರ ಗುರಿಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿತ್ತು. ಇದು ಉದ್ವಿಗ್ನತೆ ಹೆಚ್ಚಿಸಿತ್ತು. ಇದರಿಂದ ಕೆರಳಿದ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಎಂದು ವರದಿಯಾಗಿತ್ತು. ಏಪ್ರಿಲ್ 8ರಂದು ಎರಡು ವಾರಗಳ ಕದನ ವಿರಾಮ ಒಪ್ಪಂದ ಆರಂಭವಾಗಿತ್ತು. ಪಾಕಿಸ್ತಾನ, ಕತಾರ್ ಸೇರಿದಂತೆ ಇತರೆ ಮಧ್ಯವರ್ತಿಗಳ ಮೂಲಕ ಒಪ್ಪಂದದ ಮಾತುಕತೆಗಳು ನಡೆದಿದ್ದವು. ಈ ಮಾತುಕತೆ ಪೂರ್ಣಗೊಳ್ಳುವವರೆಗೆ ಕದನ ವಿರಾಮವನ್ನು ವಿಸ್ತರಿಸಲಾಗಿತ್ತು. ಫೆಬ್ರವರಿ 28ರಂದು ಯುಎಸ್ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವಾಯು ದಾಳಿ ಆರಂಭಿಸಿದ್ದವು. ಇದರ ಪರಿಣಾಮ, ಇರಾನ್‌ ತನ್ನ ಹಲವು ಉನ್ನತ ನಾಯಕರನ್ನು ಕಳೆದುಕೊಂಡಿತ್ತು. ಇದರಲ್ಲಿ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್ ಮೊಹಮ್ಮದ್ ಪಕ್ಪೂರ್, ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಸೇರಿದಂತೆ ಹಲವರು ಸೇರಿದ್ದಾರೆ ಎಂದು ತಿಳಿದುಬಂದಿದೆ.