ಮನೆ ಸುದ್ದಿ ಜಾಲ ಪ್ರತಿದಿನ ಊಟದ ನಂತರ ಒಂದು ಚಮಚ ಸೋಂಪು ಸೇವಿಸಿ, ಈ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ

ಪ್ರತಿದಿನ ಊಟದ ನಂತರ ಒಂದು ಚಮಚ ಸೋಂಪು ಸೇವಿಸಿ, ಈ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ

0

ಭಾರತೀಯ ಅಡುಗೆಗಳಲ್ಲಿ ಬಳಸಲಾಗುವ ಹಲವು ಮಸಾಲೆ ಪದಾರ್ಥಗಳು ಆಹಾರದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ನೆರವಾಗುತ್ತವೆ. ಅವುಗಳಲ್ಲಿ ಸೋಂಪು (Fennel Seeds) ಪ್ರಮುಖವಾದದ್ದು. ಸೋಂಪಿನಲ್ಲಿ ವಿಟಮಿನ್ ಗಳು, ಫೈಬರ್, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟ್ ಗಳು, ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆಂಟಿ ಫಂಗಲ್ ಗುಣಗಳು ಸಮೃದ್ಧವಾಗಿವೆ. ಆದ್ದರಿಂದ ಪ್ರತಿದಿನ ಊಟದ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಸೋಂಪು ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಸೋಂಪು ಜಗಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುವುದರ ಜೊತೆಗೆ ದೇಹಕ್ಕೆ ಹಲವಾರು ರೀತಿಯ ಲಾಭಗಳು ದೊರೆಯುತ್ತವೆ. ಅವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಊಟದ ಬಳಿಕ ಸೋಂಪು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು

ಕಣ್ಣಿನ ಆರೋಗ್ಯಕ್ಕೆ ಉತ್ತಮ
ಸೋಂಪಿನಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿದ್ದು, ಇದು ದೃಷ್ಟಿ ಸಾಮರ್ಥ್ಯವನ್ನು ಕಾಪಾಡಲು ಸಹಕಾರಿ. ಊಟದ ನಂತರ ನಿಯಮಿತವಾಗಿ ಸೋಂಪು ಸೇವಿಸುವುದರಿಂದ ಮ್ಯಾಕ್ಯುಲರ್ ಡಿಜೆನರೇಶನ್ ಹಾಗೂ ಕಣ್ಣಿನ ಪೊರೆಯಂತಹ ಸಮಸ್ಯೆಗಳಿಂದ ಕಣ್ಣುಗಳನ್ನು ರಕ್ಷಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ.

ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
ಸೋಂಪಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುವ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. ಜೊತೆಗೆ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವ ಮೂಲಕ ಚರ್ಮದ ಕಾಂತಿಯನ್ನು ಕಾಪಾಡಲು ಸಹಾಯ ಮಾಡುತ್ತವೆ.

ಉಸಿರಾಟವನ್ನು ತಾಜಾವಾಗಿರಿಸುತ್ತದೆ
ಊಟದ ಬಳಿಕ ಸೋಂಪು ಕಾಳುಗಳನ್ನು ಜಗಿಯುವುದರಿಂದ ಬಾಯಿ ಮತ್ತು ಉಸಿರಾಟದಲ್ಲಿ ತಾಜಾತನ ಉಳಿಯುತ್ತದೆ. ಇದರಲ್ಲಿರುವ ಆರೊಮ್ಯಾಟಿಕ್ ಅಂಶಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತವೆ.

ಜೀರ್ಣಕ್ರಿಯೆಗೆ ನೆರವಾಗುತ್ತದೆ
ಸೋಂಪು ಜೀರ್ಣಕಾರಿ ರಸಗಳು ಮತ್ತು ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ ಹಾಗೂ ಮಲಬದ್ಧತೆ ಸಮಸ್ಯೆಗಳನ್ನು ತಗ್ಗಿಸಲು ಇದು ಸಹಕಾರಿ. ಜೊತೆಗೆ ಅನಿಲದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಊಟದ ಬಳಿಕ ಸ್ವಲ್ಪ ಸೋಂಪು ಸೇವಿಸುವುದು ಒಳ್ಳೆಯದು.

ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ
ಸೋಂಪು ಹಸಿವಿನ ನಿಯಂತ್ರಣಕ್ಕೆ ನೆರವಾಗುತ್ತದೆ. ಇದನ್ನು ಜಗಿಯುವುದರಿಂದ ಲಾಲಾರಸದ ಉತ್ಪಾದನೆ ಹೆಚ್ಚಾಗಿ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಇದರಿಂದ ಅನಗತ್ಯವಾಗಿ ತಿನ್ನುವ ಅಭ್ಯಾಸ ಕಡಿಮೆಯಾಗಬಹುದು.

ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ
ಸೋಂಪಿನಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದ್ದು, ಇದರ ನಿಯಮಿತ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ.

ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ
ಸೋಂಪಿನಲ್ಲಿರುವ ಪೋಷಕಾಂಶಗಳು ಆಕ್ಸಿಡೇಟಿವ್ ಒತ್ತಡವನ್ನು ತಗ್ಗಿಸಲು ನೆರವಾಗುತ್ತವೆ. ಇದರಿಂದ ಮಾನಸಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಉಂಟಾಗಬಹುದು.

ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ
ಸೋಂಪನ್ನು ಜಗಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಚುರುಕಾಗುತ್ತದೆ. ಇದರಲ್ಲಿರುವ ಅನೆಥೋಲ್, ಫೆನ್ಸೋನ್ ಮತ್ತು ಎಸ್ಟ್ರಾಗೋಲ್ ಮೊದಲಾದ ಸಂಯುಕ್ತಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತವೆ.