ಮನೆ ಸುದ್ದಿ ಜಾಲ Watermelon Case: ಕಲ್ಲಂಗಡಿ ಹಣ್ಣು ಸೇವಿಸಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮರಣೋತ್ತರ ಪರೀಕ್ಷೆಯಲ್ಲಿ...

Watermelon Case: ಕಲ್ಲಂಗಡಿ ಹಣ್ಣು ಸೇವಿಸಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

0

ಮುಂಬೈ :ಮುಂಬೈನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರು ಸಾವಿನ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಬಿರಿಯಾನಿ ಊಟದ ನಂತರ ಕಲ್ಲಂಗಡಿ ಹಣ್ಣು ಸೇವಿಸಿದ ಕೆಲವೇ ಗಂಟೆಗಳಲ್ಲಿ ಕುಟುಂಬದ ಎಲ್ಲರೂ ಸಾವನ್ನಪ್ಪಿದ ಘಟನೆ ಜನರಲ್ಲಿ ಆತಂಕ ಮೂಡಿಸಿತ್ತು. ಆರಂಭದಲ್ಲಿ ಕಲ್ಲಂಗಡಿ ಹಣ್ಣು ತಿಂದದ್ದೇ ಸಾವಿಗೆ ಕಾರಣ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಆದರೆ ಇದೀಗ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಯಲ್ಲಿ ಬಹಿರಂಗವಾದ ಅಂಶಗಳು ಈ ಪ್ರಕರಣಕ್ಕೆ ಹೊಸ ತಿರುವು ನೀಡಿವೆ.

ಮುಂಬೈನ ಪೈಧುನಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಬ್ದುಲ್ ಡೊಕಾರಿಯಾ ಕುಟುಂಬ ಈ ದುರ್ಘಟನೆಗೆ ಒಳಪಟ್ಟಿದೆ. ಕಳೆದ ಶನಿವಾರ ರಾತ್ರಿ ಅವರ ಮನೆಯಲ್ಲಿ ಬಿರಿಯಾನಿ ಪಾರ್ಟಿ ನಡೆದಿತ್ತು. ಅತಿಥಿಗಳು ತೆರಳಿದ ನಂತರ, ರಾತ್ರಿ ಸುಮಾರು 1.30ರ ವೇಳೆಗೆ ಅಬ್ದುಲ್ಲಾ, ನಸ್ರೀನ್ ಮತ್ತು ಅವರ ಇಬ್ಬರು ಮಕ್ಕಳು ಕಲ್ಲಂಗಡಿ ಹಣ್ಣು ಸೇವಿಸಿದ್ದರು. ನಂತರ ಕೆಲವೇ ಗಂಟೆಗಳಲ್ಲಿ ಎಲ್ಲರೂ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಈ ಮಾಹಿತಿ ಹೊರಬಂದ ತಕ್ಷಣ ಕಲ್ಲಂಗಡಿ ಹಣ್ಣಿನ ಬಗ್ಗೆ ಜನರಲ್ಲಿ ಭೀತಿ ಉಂಟಾಯಿತು.

ಘಟನೆಯ ಬಳಿಕ ನಡೆದ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಮೃತರ ದೇಹದ ಒಳಾಂಗಗಳು ಹಸಿರು ಬಣ್ಣಕ್ಕೆ ತಿರುಗಿದ್ದವು ಎಂದು ವರದಿ ತಿಳಿಸಿದೆ. ವಿಶೇಷವಾಗಿ ಮೆದುಳು, ಹೃದಯ ಮತ್ತು ಕರುಳುಗಳಲ್ಲೂ ಇದೇ ಬದಲಾವಣೆ ಕಂಡುಬಂದಿದೆ. ಸಾಮಾನ್ಯ ವಿಷಪ್ರಾಶನದ ಸಂದರ್ಭಗಳಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ದೇಹಕ್ಕೆ ಪ್ರವೇಶಿಸಿದ ಅಪಾಯಕಾರಿ ರಾಸಾಯನಿಕದ ಪರಿಣಾಮವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಇದರ ಜೊತೆಗೆ, ಮೃತ ಅಬ್ದುಲ್ಲಾ ಅವರ ದೇಹದಲ್ಲಿ ‘ಮಾರ್ಫಿನ್’ ಎಂಬ ಪ್ರಬಲ ವೇದನಾಶಾಮಕ ಔಷಧದ ಅಂಶ ಪತ್ತೆಯಾಗಿದೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳು ಅಥವಾ ಶಸ್ತ್ರಚಿಕಿತ್ಸೆಯ ನಂತರ ತೀವ್ರ ನೋವನ್ನು ಕಡಿಮೆ ಮಾಡಲು ಮಾತ್ರ ಈ ಔಷಧ ಬಳಸಲಾಗುತ್ತದೆ. ಸಾಮಾನ್ಯ ವ್ಯಕ್ತಿಯ ದೇಹದಲ್ಲಿ ಈ ಔಷಧ ಪತ್ತೆಯಾಗಿರುವುದು ತನಿಖಾಧಿಕಾರಿಗಳಿಗೆ ಗೊಂದಲ ಮೂಡಿಸಿದೆ. ಈ ಔಷಧ ದೇಹಕ್ಕೆ ಹೇಗೆ ಸೇರಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಸಾವಿನ ನಿಖರ ಕಾರಣವನ್ನು ಉಲ್ಲೇಖಿಸಲಾಗಿಲ್ಲ. ಸಂಪೂರ್ಣ ಸತ್ಯ ಹೊರಬರಲು ವಿಧಿವಿಜ್ಞಾನ ವರದಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಈ ಬಗ್ಗೆ ವೈದ್ಯರು ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಮಗ್ಗುಲು ಕೂಡ ಬೆಳಕಿಗೆ ಬಂದಿದೆ. ಮೃತ ಅಬ್ದುಲ್ಲಾ ದೋಕಾಡಿಯಾ ಅವರು 2019ರಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು. ಜೋಗೇಶ್ವರಿ ಪ್ರದೇಶದಲ್ಲಿ ನಡೆದ ಹಣಕಾಸು ವಂಚನೆ ಪ್ರಕರಣದಲ್ಲಿ ಅವರ ಸಾಕ್ಷ್ಯ ಮಹತ್ವದ್ದಾಗಿತ್ತು. ಈ ಪ್ರಕರಣದ ವಿಚಾರಣೆ 2026ರಲ್ಲಿ ನಡೆಯಬೇಕಾಗಿತ್ತು. ಆದರೆ ವಿಚಾರಣೆಗೆ ಮುನ್ನವೇ ಅವರ ಸಾವಾಗಿದೆ ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ.