ಕೋಲ್ಕತ್ತಾ : ಆರ್ಜಿ ಕಾರ್ ಅತ್ಯಾಚಾರ ಸಂತ್ರಸ್ತೆ ತಾಯಿ ಹಾಗೂ ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾಥ್ ಅವರು ಬಂಗಾಳದ ಪಾನಿಹಟಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಯುವತಿಯ ತಾಯಿ ರತ್ನಾ ದೇಬನಾಥ್ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಾಣಿಹಟಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಬೆಳಗ್ಗೆ ಮತ ಎಣಿಕೆ ಆರಂಭ ಆಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ನ ತೀರ್ಥಂಕರ ಘೋಷ್ ಮುನ್ನಡೆ ಸಾಧಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ಹಿನ್ನಡೆ ಅನುಭವಿಸಿದ್ದಾರೆ. ಈಗ ಬಿಜೆಪಿ ಅಭ್ಯರ್ಥಿ 28,973 ಮತಗಳನ್ನು ಪಡೆದು, 10,813 ಮತಗಳ ಅಂತರದಿಂದ ಮುಂದಿದ್ದಾರೆ. ಟಿಎಂಸಿ ಅಭ್ಯರ್ಥಿ 18,160 ಮತಗಳನ್ನು ಪಡೆದಿದ್ದಾರೆ. ಬಂಗಾಳದಲ್ಲಿ ಎಂದಿಗೂ ಸರ್ಕಾರ ರಚಿಸಲು ಸಾಧ್ಯವಾಗದೇ ಇದ್ದ ಬಿಜೆಪಿ ಈಗ ಭರ್ಜರಿ ಮುನ್ನಡೆ ಸಾಧಿಸಿದೆ. ಬಿಜೆಪಿ 195 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ತೃಣಮೂಲ ಕಾಂಗ್ರೆಸ್ 93 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಘಟನೆಗಳ ಕುರಿತು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರತ್ನಾ ದೇಬನಾಥ್ ಅವರು ಚುನಾವಣಾ ಕಣಕ್ಕೆ ಇಳಿದಿದ್ದರು. ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳವು ಆಡಳಿತ ವಿಚಾರವಾಗಿ ವಿರೋಧಾಭಾಸ ಎದುರಿಸುತ್ತಿತ್ತು. ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಯುವ ವೈದ್ಯೆ ಹತ್ಯೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.














