ನವದೆಹಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ಆಹಾರದಂತಹ ಮೂಲ ಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ನಟ ದರ್ಶನ್ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ಇಂದು ಸೋಮವಾರ (ಮೇ 4) ರಂದು ಕರ್ನಾಟಕ ಸರ್ಕಾರದಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ ಎನ್ನಲಾಗುತ್ತಿದೆ.
ಈ ಕುರಿತು ನ್ಯಾಯಮೂರ್ತಿಗಳಾದ ಜೆ. ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ನಟನ ಮನವಿಯ ಮೇರೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜೈಲಿನಲ್ಲಿ ದರ್ಶನ್ ಅವರಿಗೆ ಪಂಚತಾರಾ ಸೌಲಭ್ಯ ನೀಡಬಾರದು ಎಂದು ನ್ಯಾಯಾಲಯ ಆದೇಶಿಸಿದ್ದರಿಂದಾಗಿ ಅವರಿಗೆ ಮೂಲ ಸೌಕರ್ಯವನ್ನು ನಿರಾಕರಿಸಲಾಗುತ್ತಿದೆ ಎಂದು ವಾದಿಸಿದರು ಎಂದು ತಿಳಿಸಲಾಗಿದೆ.
ಈ ಕುರಿತು ಕಳೆದ ವರ್ಷ ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ದರ್ಶನ್ ಮತ್ತು ಪ್ರಕರಣದ ಇತರೆ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿತ್ತು. ನಟನನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಅಲ್ಲಿ ಬೆಳಕಿಲ್ಲ ಮತ್ತು ಅವರಿಗೆ ಆಹಾರವೂ ಸಿಗುತ್ತಿಲ್ಲ ಎಂದು ರೋಹಟಗಿ ಕೋರ್ಟ್ ಗಮನಕ್ಕೆ ತಂದರು ಎನ್ನಲಾಗುತ್ತಿದೆ.
ಇದನ್ನುಆಲಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯ ಸ್ಥಿತಿಗತಿಯ ಕುರಿತು ಸರ್ಕಾರದಿಂದ ವರದಿ ಕೇಳಿದೆ. ಎಷ್ಟು ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ ಮತ್ತು ರಾಜ್ಯವು ಎಷ್ಟು ಸಾಕ್ಷಿಗಳನ್ನು ವಿಚಾರಣೆ ಮಾಡಲು ಉದ್ದೇಶಿಸಿದೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ವಿಚಾರಣಾ ನ್ಯಾಯಾಲಯವು ವಿಚಾರಣೆಯನ್ನು ಮುಕ್ತಾಯಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆಯೂ ನಮಗೆ ಸ್ಪಷ್ಟತೆ ಬೇಕು ಎಂದು ಕೇಳಿದೆ. “ವಿಚಾರಣಾಧೀನ ಕೈದಿಗೆ ಅರ್ಹವಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ರಾಜ್ಯದಿಂದ ತಿಳಿದುಕೊಳ್ಳಲು ಬಯಸುತ್ತೇವೆ. ಒಂದು ವಾರದೊಳಗೆ ಸೂಕ್ತ ವರದಿಗಳು ಬರುವಂತೆ ರಿಜಿಸ್ಟ್ರಿ ನೋಡಿಕೊಳ್ಳಬೇಕು” ಎಂದು ಪೀಠ ಹೇಳಿದೆ ಎನ್ನಬಹುದಾಗಿದೆ.
ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 33 ವರ್ಷದ ರೇಣುಕಾಸ್ವಾಮಿ ಎಂಬ ಅಭಿಮಾನಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೋಲೆ ಮಾಡಿರುವ ಆರೋಪವನ್ನು ನಟ ದರ್ಶನ್, ನಟಿ ಪವಿತ್ರಾ ಗೌಡ ಮತ್ತು ಇತರೆ ಹಲವರು ಎದುರಿಸುತ್ತಿದ್ದಾರೆ ಎನ್ನಲಾಗಿದ್ದು. ಈ ಪ್ರಕರಣ ಜೂನ್ 2024 ರಲ್ಲಿ ಬೆಂಗಳೂರಿನ ಶೆಡ್‌ನಲ್ಲಿ ಮೂರು ದಿನಗಳ ಕಾಲ ಸಂತ್ರಸ್ತನನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗಿತ್ತು. ಆತನ ಶವ ಚರಂಡಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ವರದಿ ನೀಡಿದ್ದರು ಎನ್ನಲಾಗಿದೆ.















