ನಗರದಲ್ಲಿ ಮಹಿಳೆಯರ ಭದ್ರತೆ ಹೇಗಿದೆ? ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ರಕ್ಷಣೆ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಸ್ವತಃ ಮಹಿಳಾ ಪೊಲೀಸ್ ಕಮಿಷನರ್ ಒಬ್ಬರು ಸಾಮಾನ್ಯ ಮಹಿಳೆಯಂತೆ ಬಸ್ ನಿಲ್ದಾಣದಲ್ಲಿ ನಿಂತು ಪರಿಸ್ಥಿತಿ ಅವಲೋಕಿಸಿದ್ದಾರೆ. ಈ ವೇಳೆ, ಅವರಿಗೆ ಆಘಾತಕಾರಿ ಅನುಭವ ಎದುರಾಗಿದೆ. ಕೇವಲ ಮೂರು ಗಂಟೆಗಳಲ್ಲಿ ಸುಮಾರು 40 ಮಂದಿ ಅವರಿಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ಹೈದರಾಬಾದ್ನಲ್ಲಿ ನಡೆದಿರುವುದು ಎನ್ನಲಾಗಿದೆ.
ತೆಲಂಗಾಣದ ಮಹಿಳಾ ಐಪಿಎಸ್ ಅಧಿಕಾರಿ ಸುಮತಿ ಅವರು ಮೇ 1 ರಂದು ಮಲ್ಕಾಜ್ಗಿರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಅಂದೇ ಮಧ್ಯರಾತ್ರಿ, ಅವರು ಮಹಿಳಾ ಸುರಕ್ಷತೆಯನ್ನು ಪರೀಕ್ಷಿಸಲು ಮುಂದಾದರು. ಹೈದರಾಬಾದ್ನ ಜನನಿಬಿಡ ದಿಲ್ಸುಖ್ನಗರ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಮಹಿಳೆಯಂತೆ, ಮಾಮೂಲಿ ಬಟ್ಟೆ ಧರಿಸಿ ನಿಂತಿದ್ದರು. ಯಾವುದೇ ಭದ್ರತೆ, ಮುಖಕ್ಕೆ ಮಾಸ್ಕ್ ಇಲ್ಲದೆ ಮಧ್ಯರಾತ್ರಿ 12:30 ರಿಂದ 3:30 ರವರೆಗೆ ಅಲ್ಲೇ ಇದ್ದರು. ಅವರು ಒಂಟಿಯಾಗಿರುವುದನ್ನು ನೋಡಿ, ಮೂರು ಗಂಟೆಗಳಲ್ಲಿ ಸುಮಾರು 40 ಪುರುಷರು ಕಿರುಕುಳ ನೀಡಲು ಯತ್ನಿಸಿದರು. ‘ರಾತ್ರಿ ಬರ್ತೀಯಾ? ರೇಟ್ ಎಷ್ಟು?’ ಎಂದು ಅಸಭ್ಯವಾಗಿ ಮಾತನಾಡಿಸಿ ಪೇಚಿಗೆ ಸಿಲುಕಿಸಿದರು. ಕಿರುಕುಳ ನೀಡಿದವರಲ್ಲಿ ಡ್ರಗ್ಸ್ ವ್ಯಸನಿಗಳಿಂದ ಹಿಡಿದು, ಸುಶಿಕ್ಷಿತ ಯುವಕರೂ ಇದ್ದರು ಎಂಬುದು ಗಮನಾರ್ಹ ಎನ್ನಲಾಗಿದೆ.
ಈ ಕುರಿತ್ತಾಗಿ ಕಮಿಷನರ್ ಸುಮತಿ ಅವರ ರಕ್ಷಣೆಗಾಗಿ ಸ್ವಲ್ಪ ದೂರದಲ್ಲಿ ಮಫ್ತಿಯಲ್ಲಿ ಪೊಲೀಸರು ಇದ್ದರು. ಯಾರಾದರೂ ಕಿರುಕುಳ ನೀಡುತ್ತಿದ್ದಂತೆ ಕಮಿಷನರ್ ಸಿಗ್ನಲ್ ಕೊಡುತ್ತಿದ್ದರು, ತಕ್ಷಣ ಪೊಲೀಸರು ಅವರನ್ನು ಹಿಡಿದುಕೊಳ್ಳುತ್ತಿದ್ದರು. ಸಿಕ್ಕಿಬಿದ್ದವರಲ್ಲಿ ಅರ್ಧದಷ್ಟು ಮಂದಿ ವಿದ್ಯಾರ್ಥಿಗಳು ಮತ್ತು ಖಾಸಗಿ ಉದ್ಯೋಗಿಗಳಾಗಿದ್ದರು. ಕೆಲವರು ಕುಡಿದ ಮತ್ತಿನಲ್ಲಿದ್ದರು. ಇವರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಬದಲು, ಪೊಲೀಸರು ಕೌನ್ಸೆಲಿಂಗ್ ನೀಡಲು ನಿರ್ಧರಿಸಿದರು. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಅವರಿಗೆ ಅರಿವು ಮೂಡಿಸಿದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವ ಮಹಿಳೆಯರ ಕಷ್ಟ ತಿಳಿಯಲು ಈ ಪ್ರಯತ್ನ ಮಾಡಿದ್ದಾಗಿ ಕಮಿಷನರ್ ಸುಮತಿ ಐಪಿಎಸ್ ತಿಳಿಸಿದರು. ಈ ಅನುಭವದ ನಂತರ, ನಗರದಲ್ಲಿ ರಾತ್ರಿ ಗಸ್ತು ಮತ್ತು ಸಿಸಿಟಿವಿ ಕಣ್ಗಾವಲು ಹೆಚ್ಚಿಸುವುದಾಗಿ ಅವರು ಹೇಳಿದರು. ಆದರೆ ಮಹಿಳಾ ಪೊಲೀಸ್ ಅಧಿಕಾರಿಯ ಸ್ಥಿತಿಯೇ ಹೀಗಾದರೆ, ಸಾಮಾನ್ಯ ಮಹಿಳೆಯರ ಪಾಡೇನು? ರಾತ್ರಿ ಮಾತ್ರವಲ್ಲ, ಹಗಲಲ್ಲೂ ಅವರು ರಸ್ತೆಯಲ್ಲಿ ಸ್ವೇಚ್ಛೆಯಾಗಿ ತಿರುಗಾಡುವ ಪರಿಸ್ಥಿತಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
ತುರ್ತು ಸಂದರ್ಭಗಳಲ್ಲಿ ಮಹಿಳೆಯರು ರಸ್ತೆಗೆ ಬಂದರೆ ಪರಿಸ್ಥಿತಿ ಎಷ್ಟು ಘೋರವಾಗಿರುತ್ತದೆ ಎಂಬುದನ್ನು ಮಹಿಳಾ ಸಿಪಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಈ ಘಟನೆ ಹೈದರಾಬಾದ್ನಲ್ಲಿ ದುಡಿಯುವ ಸಾಮಾನ್ಯ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದೆ. ಪೊಲೀಸರ ಭಯದಿಂದಲ್ಲ, ಪ್ರತಿಯೊಬ್ಬ ಮಹಿಳೆಯನ್ನು ತಾಯಿ, ಸಹೋದರಿ, ಮಗಳೆಂದು ಪುರುಷರು ಭಾವಿಸಿದ ದಿನವೇ ಅವರಿಗೆ ನಿಜವಾದ ಭದ್ರತೆ ಸಿಗಲಿದೆ ಎನ್ನಬಹುದಾಗಿದೆ.















