ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯ ಪಟ್ಟಣದ ಊರಿನ ಮಧ್ಯದಲ್ಲಿ ಇತಿಹಾಸ ನೆನಪಿಸುವ ಕೋಟೆ ಇದೆ. ಈ ಕೋಟೆ ಕೆಳದಿ ಅರಸರ ಕಾಲಕ್ಕೆ ಸೇರಿದ್ದರೂ ಸಖರಾಯಪಟ್ಟಣದ ಜನ ಮಾತ್ರ ಇದನ್ನ ಇಂದಿಗೂ ಅದನ್ನು ಉಳಿಸಿಕೊಂಡೇ ಬಂದಿದ್ದಾರೆ ಎನ್ನಲಾಗಿದೆ.
ಈ ಕುರಿತು ಶಕುನಗಿರಿ ದೇವಸ್ಥಾನದ ಅಧ್ಯಕ್ಷ ಸಚ್ಚಿದಾನಂದ ಅವರು ಮಾತನಾಡಿ, ‘ಇತಿಹಾಸದ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸ ಅರುವಡಿ ಶ್ರೀ ರಂಗ ರಾಯರು ವಿಜಯನಗರ ಅರಸರ ಸಹಾಯ ಪಡೆದು ಈ ಕೋಟೆಯನ್ನ ನಿರ್ಮಾಣ ಮಾಡಿದ್ದಾರೆ. ಸುಮಾರು 1646-47ನೇ ಇಸವಿಯಲ್ಲಿ ಈ ಕೋಟೆಯನ್ನು ನಿರ್ಮಾಣ ಮಾಡಿದ್ದಾರೆ. ಈ ಕೋಟೆ ಒಂದು ಸುತ್ತಿನ ಕೋಟೆಯಾಗಿದ್ದು, ಊರಿನ ಮಧ್ಯ ಭಾಗದಲ್ಲಿಯೇ ಇದೆ. ಅಂದಿನ ಕಾಲದಲ್ಲೇ ಚಿನ್ನದ ನಾಣ್ಯವನ್ನು ನಿರ್ಮಾಣ ಮಾಡುವ ಟಂಕ ಸಾಲೆ ಇದ್ದಿದ್ದರಿಂದಾಗಿ ಬಿಗಿ ಭದ್ರತೆಗಾಗಿ ಈ ಒಂದು ಸುತ್ತಿನ ಕೋಟೆಯನ್ನ ನಿರ್ಮಾಣ ಮಾಡಿದ್ದರು. ಅಲ್ಲದೇ, ಭದ್ರತೆಗಾಗಿ ನೀರಿನ ಗುಂಡಿ ನಿರ್ಮಿಸಿ ಅದಕ್ಕೆ ಅಯ್ಯನಕೆರೆಯ ನೀರನ್ನು ಬಿಡಲಾಗಿತ್ತು’ ಎಂದಿದ್ದಾರೆ.
ಈ ‘ಸಖರಾಯ ಪಟ್ಟಣದ ಕೋಟೆಯ ಮೇಲೆ ಪ್ರಸಿದ್ಧ ಫಿರಂಗಿಯೊಂದು ಇದೆ. ಇದು ರಾಜ್ಯದಲ್ಲೇ 3ನೇ ಅತೀ ಉದ್ದದ ಫಿರಂಗಿ ಎಂದು ಹೆಸರು ಪಡೆದಿದೆ. ಉಳಿದ 2 ಫಿರಂಗಿಗಳು ಬಿಜಾಪುರದಲ್ಲಿ ಇವೆ. ಇನ್ನೂ ಆಶ್ಚರ್ಯ ಅನ್ನುವಂತೆ ಈ ಫಿರಂಗಿಯನ್ನು ಮೇಲೆ ಹೇಗೆ ತೆಗೆದುಕೊಂಡು ಹೋದರು ಅನ್ನುವುದೇ ಪ್ರಶ್ನೆ ಆಗಿ ಉಳಿದಿದೆ’ ಎಂದು ತಿಳಿಸಿದ್ದಾರೆ. ‘ಈ ದೊಡ್ಡ ಫಿರಂಗಿಯನ್ನು ಊರಿನ ರಕ್ಷಣೆಗಾಗಿ ಬಳಸಲಾಗುತಿತ್ತು. ಫಿರಂಗಿಯು ಸುಮಾರು 19 ಅಡಿ ಉದ್ದವಿದ್ದು, ಸುಮಾರು 22 ರಿಂದ 24 ಟನ್ ತೂಕವಿದೆ. ಒಬ್ಬನೇ ತಿರುಗಿಸುವ ರೀತಿಯಲ್ಲಿ ಆ ಕಾಲದಲ್ಲಿಯೇ ಈ ಫಿರಂಗಿಯ ನಿರ್ಮಾಣ ಮಾಡಲಾಗಿತ್ತು. ಕೋಟೆಯ ಮೇಲ್ಭಾಗದಲ್ಲಿ ಫಿರಂಗಿ ಇದ್ದಿದ್ದರಿಂದಾಗಿ ಶತ್ರುಗಳನ್ನ ಸಂಹರಿಸಲು ಸಹಾಯ ಮಾಡ್ತಾ ಇತ್ತು. ಇದರಲ್ಲಿನ ಮದ್ದುಗಳು ಎರಡು ಮೈಲಿ ದೂರಕ್ಕೆ ಸಾಗುತ್ತಿದ್ದವು’ ಎಂದಿದ್ದಾರೆ ಎನ್ನಬಹುದು.
ಇದು ಇತಿಹಾಸದ ಗತಕಾಲವನ್ನು ನೆನಪಿಸಬೇಕಿದ್ದ ಕೋಟೆ ಸದ್ಯ ಅವನತಿಗೆ ತಲುಪಿರುವುದು ವಿಷಾದನೀಯವಾಗಿದೆ. ಪುರಾತತ್ವ ಇಲಾಖೆಯವರು ಇಂತಹ ಕೋಟೆಗಳನ್ನು ಸಂರಕ್ಷಣೆ ಮಾಡಬೇಕಿದೆ ಹಾಗೂ ಇತಿಹಾಸವನ್ನು ಸಾರುವ ರೀತಿಯಲ್ಲಿ ಇಲ್ಲಿನ ಸ್ಥಳದ ಮಹತ್ವ ಹಾಗೂ ಈ ಕೋಟೆಯ ನಿರ್ಮಾಣವಾದ ವರ್ಷ ಹಾಗೂ ಯಾರ ಕಾಲದಲ್ಲಿ ಕೋಟೆ ನಿರ್ಮಾಣವಾಯಿತು?. ಯಾವ ಉದ್ದೇಶಕ್ಕಾಗಿ ನಿರ್ಮಾಣವಾಯಿತು ಎಂಬ ಅಂಶಗಳನ್ನು ಕುರಿತ ಬೋರ್ಡ್ಗಳನ್ನು ನಿರ್ಮಾಣ ಮಾಡಿ, ಇದನ್ನು ಸಂರಕ್ಷಣೆ ಮಾಡಿದರೆ, ಇದೊಂದು ಪ್ರವಾಸಿ ತಾಣ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಈ ಕೋಟೆಯನ್ನು ಉಳಿಸಿ ಮುಂದಿನ ಪೀಳಿಗೆ ನೋಡುವ ರೀತಿ ಮಾಡುವ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

















