ಮನೆ ಸುದ್ದಿ ಜಾಲ ಕೈದಿಗಳಿಗೆ ಹೊಸ ರೂಲ್ಸ್‌ : ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ

ಕೈದಿಗಳಿಗೆ ಹೊಸ ರೂಲ್ಸ್‌ : ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ

0

ಬೆಂಗಳೂರುಪರಪ್ಪನ ಅಗ್ರಹಾರ ಜೈಲಿನಲ್ಲಿ ಅನುಚಿತ ವರ್ತನೆ ಹಾಗೂ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಪ್ರಿಸನರ್ಸ್‌ ಟ್ರ್ಯಾಕಿಂಗ್ ಮೂವ್‌ಮೆಂಟ್‌ ಸಿಸ್ಟಂ ಪರಿಚಯಿಸಲಾಗಿದ್ದು, ಇನ್ನು ಮುಂದೆ ಪ್ರತಿ ಬ್ಯಾರಕ್‌ ಪ್ರವೇಶಿಸುವಾಗ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ ಎನ್ನಲಗುತ್ತಿದೆ.

ಈ ಕುರಿತು ಈಗಾಗಲೇ ಜೈಲಿನಲ್ಲಿ ಕೃತಕ ಬುದ್ದಿಮತ್ತೆ (ಎಐ) ಕ್ಯಾಮೆರಾಗಳ ಮೂಲಕ ಕೈದಿಗಳು ಮತ್ತು ಅಧಿಕಾರಿ-ಸಿಬ್ಬಂದಿ ಮೇಲೆ ನಿಗಾವಹಿಸಲಾಗಿತ್ತು. ಇದೀಗ ಅದರೊಂದಿಗೆ ಕೈದಿಗಳ ಫೋನ್ ಕರೆ ವ್ಯವಸ್ಥೆ ಸಂಪೂರ್ಣ ಡಿಜಿಟಲ್ ಟ್ರ್ಯಾಕಿಂಗ್, ಸಂದರ್ಶಕರನ್ನು ಭೇಟಿಯಾಗಲು ಡಿಜಿಟಲ್ ಟೋಕನ್ ಪದ್ಧತಿ ಸೇರಿ ಕಾರಾಗೃಹ ಬಂಧಿಗಳ ಚಲನವಲನಗಳ ಮೇಲೆ ಸಂಪೂರ್ಣ ನಿಗಾ ಇಡಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದಕ್ಕೆ ಸುಮಾರು 2.25 ಕೋಟಿ ರೂ. ವೆಚ್ಚವಾಗಿದೆ ಎಂದು ಜೈಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಬಹುದಾಗಿದೆ.

ಶಿಕ್ಷಾಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಪ್ರತ್ಯೇಕ ಬ್ಯಾರಕ್​ಗಳಲ್ಲಿದ್ದರೂ ಊಟ ಹಾಗೂ ಚಿಕಿತ್ಸೆ ಪಡೆಯುವ ನೆಪದಲ್ಲಿ ಒಂದೇ ಕಡೆ ಸೇರುತ್ತಿದ್ದಾರೆ. ಅದರಿಂದ ಪರಸ್ಪರ ವಿಚಾರ ವಿನಿಮಯಗೊಂಡು ಪರೋಕ್ಷವಾಗಿ ಜೈಲಿನ ಹೊರಗಡೆ ಮತ್ತು ಆವರಣದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಾರಣವಾಗುತ್ತಿದ್ದರು. ಅಲ್ಲದೆ, ಸಂದರ್ಶಕರ ಭೇಟಿ ಕೊಠಡಿಗೆ ಜೈಲಿನ ವಿವಿಧ ಬ್ಯಾರಕ್​ನಿಂದ ಪ್ರವೇಶದ್ವಾರಕ್ಕೆ ಬರುವ ಕೈದಿಗಳು ಮಾತುಕತೆ ನಡೆಸಿದ ಬಳಿಕ ನೇರವಾಗಿ ಬ್ಯಾರಕ್​ಗೆ ಹೋಗದೆ, ಆಸ್ಪತ್ರೆ ಹಾಗೂ ಸಜಾಬಂಧಿಗಳ ಬ್ಯಾರಕ್​ಗಳಿಗೆ ಹೋಗುತ್ತಿದ್ದರು. ಹೀಗಾಗಿ ಅವರ ಮೇಲೆ ನಿಗಾ ಇಡುವ ಅಗತ್ಯವಿದ್ದು, ವಿಚಾರಣಾಧೀನ ಹಾಗೂ ಸಜಾಬಂಧಿಗಳಿಗೆ ಪ್ರತ್ಯೇಕ ಊಟದ ಕ್ಯಾಂಟೀನ್ ಜತೆ, ಸಣ್ಣಪುಟ್ಟ ಚಿಕಿತ್ಸೆ ಪಡೆಯಲು ಆಯಕಟ್ಟಿನ ಜಾಗದಲ್ಲಿ ಹೊರ ರೋಗಿಗಳ ವಿಭಾಗ (ಒಪಿಡಿ) ತೆರೆಯಲು ಮುಂದಾಗಿದೆ. ಗಂಭೀರ ಪ್ರಮಾಣದಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಕೈದಿಗಳು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ ಜೈಲಿನ ಪ್ರತಿ ಬ್ಯಾರಕ್‌, ಸಂದರ್ಶಕರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್‌, ಅಡುಗೆ ಕೋಣೆ, ಗ್ರಂಥಾಲಯ, ಮೈದಾನ, ಕರಕುಶಲ ಕಾರ್ಖಾನೆಗಳು, ಬೇಕರಿ ಸೇರಿ ಎಲ್ಲೆಡೆ ಬಯೋಮೆಟ್ರಿಕ್‌ ವ್ಯವಸ್ಥೆ ಮಾಡಲಾಗಿದೆ. ಪ್ರಮುಖವಾಗಿ ಸಂದರ್ಶಕರ ಕೊಠಡಿಗೆ ಹೋಗುವಾಗ ಬಯೊಮೆಟ್ರಿಕ್‌ ಜೊತೆಗೆ ಟೋಕನ್ ಪಡೆಯಬೇಕು. ಈ ಟೋಕನ್​ನಲ್ಲಿ ಕೈದಿಯ ಹೆಸರು, ಸಂಖ್ಯೆ, ಸಮಯ ಸೇರಿ ಇತರೆ ಅಂಶಗಳನ್ನು ಜೈಲು ಸಿಬ್ಬಂದಿ ಸಾಫ್ಟ್‌ವೇರ್‌ನಲ್ಲಿ ಅಪ್‌ಡೇಟ್‌ ಮಾಡುತ್ತಾರೆ. ಹೀಗೆ ಪ್ರತಿ ಬಾರಿ ಸಂದರ್ಶಕರನ್ನು ಭೇಟಿಯಾಗಲು ಬಂದು ಹೋಗುವ ಕೈದಿಗಳ ಚಲನವಲನಗಳ ಸಂಪೂರ್ಣ ದತ್ತಾಂಶ ಸಂಗ್ರಹವಾಗಲಿದೆ .

ಇನ್ನು ಆಸ್ಪತ್ರೆ, ಗ್ರಂಥಾಲಯ ಹಾಗೂ ಕಾರ್ಯನಿಮಿತ್ತ ಬೇರೆ ಬ್ಯಾರಕ್‌ಗಳ ಪ್ರವೇಶ ದ್ವಾರದಲ್ಲೂ ಇದೇ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬೇರೆ ಕೈದಿಗಳ ಜತೆ ಸೇರಿ ಅಕ್ರಮ ಚಟುವಟಿಕೆಗೆ ಮುಂದಾದರೆ ಅಂತಹ ಕೈದಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಸಿಸ್ಟಂ ಸಹಕಾರಿಯಾಗಲಿದೆ. ಅಲ್ಲದೆ, ಎಲ್ಲೆಲ್ಲಿ ಎಷ್ಟು ಹೊತ್ತು ಕಾಲ ಕಳೆದರೂ ಸೇರಿ ಪ್ರತಿ ಕ್ಷಣವನ್ನು ಟ್ರ್ಯಾಕಿಂಗ್ ಮಾಡಬಹುದಾಗಿದೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದರು ಎನ್ನಲಾಗಿದೆ.

ಹಾಗೂ ಕೈದಿಗಳ ಪ್ರತಿಯೊಂದು ಚಲನವಲನ ತಿಳಿಯಲು ಇಲಾಖೆಯು ಕ್ಯಾಂಟೀನ್ ಯೂಸೇಜ್ ಸಿಸ್ಟಂ ಜಾರಿಗೆ ತರಲಾಗಿದೆ. ಜೈಲಿನಲ್ಲಿರುವ ಕ್ಯಾಂಟೀನ್​ನಲ್ಲಿ ನೇರವಾಗಿ ಹಣ ಪಾವತಿಸದೆ ಸದ್ಯ ಇರುವ ವಾಲೆಟ್ ಅಥವಾ ಕೂಪನ್ ನೀಡಿ (ಹಣ ಪಾವತಿಸಿ ಕೂಪನ್‌ ಪಡೆಯಬೇಕು) ಬನ್ – ಬಿಸ್ಕತ್ ಸೇರಿ ಬೇಕರಿ ತಿನಿಸುಗಳನ್ನು ತಿನ್ನಲು ಖರೀದಿಸಬಹುದಾಗಿದೆ. ಈ ಮೂಲಕ ಖರೀದಾರನ ಹೆಸರು, ಖರೀದಿ ಮಾಡಿದ ವಸ್ತು, ಅದರ ಪ್ರಮಾಣ, ಸಮಯ ಹಾಗೂ ದಿನಾಂಕ, ವಾಲೆಟ್​ನಲ್ಲಿ ಬಾಕಿಯಿರುವ ಹಣ ಸೇರಿ ಪ್ರತಿಯೊಂದು ಮಾಹಿತಿಯೂ ಟ್ರ್ಯಾಕ್ ಆಗಲಿದೆ. ಇದರಿಂದ ಕೈದಿಯ ಪ್ರತಿ ಖರ್ಚಿನ ವಿವರದ ದತ್ತಾಂಶಗಳಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜೈಲಿನ ಪ್ರತಿ ಬ್ಯಾರಕ್‌ನ ಪ್ರವೇಶ ದ್ವಾರದಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜತೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಮೂಲಕ ಯಾವ ಕೈದಿ, ಯಾವ ಬ್ಯಾರಕ್‌ಗೆ ಹೋಗಿದ್ದಾನೆ. ಎಷ್ಟು ಸಮಯ ಕಳೆದಿದ್ದಾನೆ, ಯಾಕೆ ಹೋಗಿದ್ದಾನೆ ಎಂಬ ಮಾಹಿತಿ ದೊರೆಯುತ್ತದೆ. ಈ ಕೈದಿಗಳ ಮೇಲೆ ನಿಗಾವಹಿಸುವುದರ ಜತೆಗೆ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಹಾಕಬಹುದು ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ  ತಿಳಿಸಿದ್ದಾರೆ ಎನ್ನಲಾಗುತ್ತಿದೆ.