ಮನೆ ಸುದ್ದಿ ಜಾಲ ಹೈಕೋರ್ಟ್  : ಅಪಘಾತ ಪ್ರಕರಣದಲ್ಲಿ ಪರಿಹಾರ ನೀಡಲು: ₹25 ಸಾವಿರ ದಂಡ ವಿಧಿಸಿದೆ

ಹೈಕೋರ್ಟ್  : ಅಪಘಾತ ಪ್ರಕರಣದಲ್ಲಿ ಪರಿಹಾರ ನೀಡಲು: ₹25 ಸಾವಿರ ದಂಡ ವಿಧಿಸಿದೆ

0

ಬೆಂಗಳೂರು: ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ತನ್ನದೇ ತಪ್ಪನ್ನು ಮುಚ್ಚಿಟ್ಟು ತಪ್ಪು ಮಾಹಿತಿ ನೀಡುವ ಮೂಲಕ ನ್ಯಾಯಾಲಯದ ಹಾದಿ ತಪ್ಪಿಸಲು ಪ್ರಯತ್ನಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್​ಟಿಸಿ)ಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ ಎನ್ನಲಾಗಿದೆ.

ತನ್ನದೇ ಸಿಬ್ಬಂದಿಯ ತಪ್ಪನ್ನು ಒಪ್ಪಿಕೊಂಡು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದ ಬಳಿಕವೂ ಸಂತ್ರಸ್ತರದ್ದೇ ತಪ್ಪು ಎಂಬುದಾಗಿ ದ್ವಂದ್ವ ನಿಲುವು ಪ್ರದರ್ಶನ ಮಾಡುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ತಿಳಿಸಿದೆ. ಅಪಘಾತಗಳ ಪರಿಹಾರ ನ್ಯಾಯಾಧೀಕರಣದ ಆದೇಶವನ್ನು ಪ್ರಶ್ನಿಸಿ ಕೆಕೆಆರ್‌ಟಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ದಂಡದ ಮೊತ್ತವನ್ನು ದ್ವಂದ್ವ ನಿಲುವಿಗೆ ಕಾರಣರಾದ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ಸೂಚನೆ ನೀಡಿದೆ. ಇದರಿಂದ ನಿಗಮದ ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅಪಘಾತಕ್ಕೆ ಸಂಬಂಧಿಸಿದಂತೆ ನಿಗಮವು ಈಗಾಗಲೇ ಆಂತರಿಕ ಶಿಸ್ತು ಕ್ರಮ ಕೈಗೊಂಡು, ಅಪಘಾತಕ್ಕೆ ಕಾರಣನಾದ ಗುತ್ತಿಗೆ ಆಧಾರಿತ ಚಾಲಕನನ್ನು ಸೇವೆಯಿಂದ ವಜಾಗೊಳಿಸಿದೆ. ಅಲ್ಲದೆ, ನಿರ್ವಾಹಕನ ವಾರ್ಷಿಕ ವೇತನ ಬಡ್ತಿಯನ್ನು ಕಡಿತಗೊಳಿಸಿದೆ. ಪ್ರಕರಣದಲ್ಲಿ ತನ್ನದೇ ನೌಕರರ ತಪ್ಪು ಎಂದು ಒಪ್ಪಿಕೊಂಡು ಶಿಕ್ಷೆ ನೀಡಿದೆ. ಹೀಗಿದ್ದರೂ ಮೃತರದ್ದೇ ತಪ್ಪು ಎಂದು ಹೈಕೋರ್ಟ್​ನಲ್ಲಿ ವಾದಿಸಿರುವುದು ಸರಿಯಲ್ಲ. ಒಂದೆಡೆ ನೌಕರರನ್ನು ವಜಾ ಮಾಡಿ, ಮತ್ತೊಂದೆಡೆ ಮೃತ ವ್ಯಕ್ತಿ ಕಾರಣ ಎಂದು ಹೇಳುವುದು ದ್ವಂದ್ವ ನಿಲುವು ಮತ್ತು ಕಾನೂನುಬಾಹಿರ. ಅಲ್ಲದೆ, ನ್ಯಾಯಾಲಯಕ್ಕೆ ಬರುವ ದಾವೆದಾರರು ಶುದ್ಧ ಹಸ್ತದಿಂದ ಬರಬೇಕಾಗಿದ್ದು, ತಪ್ಪು ಮಾಹಿತಿ ನೀಡದಲ್ಲಿ ಯಾವುದೇ ಪರಿಹಾರ ಪಡೆಯುವುದಕ್ಕೆ ಅರ್ಹರಾಗಿರುವುದಿಲ್ಲ. ಈ ರೀತಿಯ ಕ್ರಮ ನ್ಯಾಯಾಂಗ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಹೇಳಿದೆ ಎನ್ನಲಾಗುತ್ತಿದೆ.

ಹೀಗೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 25 ಸಾವಿರ ರೂ.ಗಳ ದಂಡ ಪಾವತಿಸಬೇಕು. ದಂಡದ ಮೊತ್ತವನ್ನು ಈ ಮೊಕದ್ದಮೆ ಹೂಡಲು ಕಾರಣರಾದ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ಆಂತರಿಕ ಶಿಸ್ತು ಕ್ರಮದ ಮಾಹಿತಿಯನ್ನು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಮತ್ತು ಇಂತಹ ದ್ವಂದ್ವ ನಿಲುವುಗಳನ್ನು ತಡೆಗಟ್ಟಲು ನಿಗಮವು ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಬೇಕು. ಈ ಸಂಬಂಧ ಸೂಕ್ತ ಸುತ್ತೋಲೆಯನ್ನು ಹೊರಡಿಸಬೇಕು ಎಂದು ಕೆಕೆಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ.