ಮನೆ ರಾಜ್ಯ ವರದಕ್ಷಿಣೆ ಪ್ರಕರಣ; ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ, ಆತಂಕಕಾರಿ ಅಂಕಿಅಂಶ ಬಿಡುಗಡೆ ಮಾಡಿದ NCRB

ವರದಕ್ಷಿಣೆ ಪ್ರಕರಣ; ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ, ಆತಂಕಕಾರಿ ಅಂಕಿಅಂಶ ಬಿಡುಗಡೆ ಮಾಡಿದ NCRB

0

ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಕುರಿತು ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ‘ಕ್ರೈಂ ಇನ್ ಇಂಡಿಯಾ 2024’ ವರದಿಯ ಪ್ರಕಾರ, ವರದಕ್ಷಿಣೆ ನಿಷೇಧ ಕಾಯ್ದೆ 1961ರ ಅಡಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂಚೂಣಿಯಲ್ಲಿರುವ, ಆಧುನಿಕತೆಯತ್ತ ಮುಖ ಮಾಡಿರುವ ಈ ಮಹಾನಗರದಲ್ಲಿ ಇಂತಹ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತವಾಗಿರುವುದು ತೀವ್ರ ಕಳವಳಕ್ಕೆ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಪರಿಸ್ಥಿತಿಗೆ ಕಾರಣವಾಗಿದೆ. ವರದಿಯ ಅಂಕಿಅಂಶಗಳ ಪ್ರಕಾರ, 2024ನೇ ಸಾಲಿನಲ್ಲಿ ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ಒಟ್ಟು 1,008 ವರದಕ್ಷಿಣೆ ಸಂಬಂಧಿತ ಪ್ರಕರಣಗಳು ದಾಖಲಾಗಿವೆ.

ಇದರಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ, ಕೇವಲ ಬೆಂಗಳೂರು ನಗರವೊಂದರಲ್ಲೇ 878 ಪ್ರಕರಣಗಳು ವರದಿಯಾಗಿವೆ. ಅಂದರೆ ದೇಶದ ಪ್ರಮುಖ ಮಹಾನಗರಗಳಲ್ಲಿ ದಾಖಲಾದ ಒಟ್ಟು ವರದಕ್ಷಿಣೆ ಪ್ರಕರಣಗಳಲ್ಲಿ ಬರೋಬ್ಬರಿ ಶೇಕಡಾ 87ರಷ್ಟು ಪಾಲು ಕೇವಲ ಕರ್ನಾಟಕದ ರಾಜಧಾನಿಯದ್ದಾಗಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದ ಲಕ್ನೋದಲ್ಲಿ ಕೇವಲ 48 ಪ್ರಕರಣಗಳು ಮಾತ್ರ ದಾಖಲಾಗಿವೆ. ಈ ಎರಡು ನಗರಗಳ ನಡುವಿನ ಬೃಹತ್ ವ್ಯತ್ಯಾಸವನ್ನು ಗಮನಿಸಿದರೆ ಬೆಂಗಳೂರಿನ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.