ಮೈಸೂರು: ಕೆ.ಆರ್. ನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಹಣದಾಸೆಗೆ ವೃದ್ಧೆಯನ್ನು ಕೊಲೆ ಮಾಡಿ, ಶವವನ್ನು ಶೌಚಾಲಯದ ಒಳಚರಂಡಿ ಗುಂಡಿಯಲ್ಲಿ ಹಾಕಿರುವ ಅಮಾನವೀಯ ಘಟನೆ ನಡೆದಿದೆ. ತಿಪ್ಪೂರು ಗ್ರಾಮದ ಲೇಟ್ ಮೂಡ್ಲಶೆಟ್ಟಿ ಅವರ ಪತ್ನಿ ಗೌರಮ್ಮ (90) ಕೊಲೆಯಾದ ವೃದ್ಧೆ. ಅದೇ ಗ್ರಾಮದ ವೀರಭದ್ರ ಆರೋಪಿಯಾಗಿದ್ದಾನೆ. ಕೊಲೆಯಾದ ವೃದ್ಧೆಗೆ ಮೂವರು ಗಂಡು ಮಕ್ಕಳು ಹಾಗೂ ಒರ್ವ ಪುತ್ರಿ ಇದ್ದು, ಮೂವರು ಕೂಡ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.
ವೃದ್ಧೆ ಗೌರಮ್ಮಳಿಗೆ ವೀರಭದ್ರ ತೀರ ಪರಿಚಿತನಾಗಿದ್ದು, ಬಹಳಷ್ಟು ವಿಶ್ವಾಸಗಳಿಸಿದ್ದ. ಆದ್ದರಿಂದ ಗೌರಮ್ಮ ಅವರ ಬ್ಯಾಂಕ್ ಖಾತೆಯಲ್ಲಿನ ಹಣ ಡ್ರಾ ಮಾಡುವುದು, ಇತರೆ ಕೆಲಸವನ್ನು ಮಾಡಿಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 15 ದಿನಗಳ ಹಿಂದೆ ಗೌರಮ್ಮ ವೀರಭದ್ರನ ಜೊತೆ ಬ್ಯಾಂಕ್ ಹೋಗಿ 75 ಸಾವಿರ ಹಣ ಡ್ರಾ ಮಾಡಿದ್ದಾರೆ. ಬಳಿಕ ತುರ್ತಾಗಿ ಹಣಬೇಕು ಕೊಡಿ ಎಂದು ಗೌರಮ್ಮರ ಬಳಿ ಇದ್ದ 75 ಸಾವಿರ ಹಣ ಆರೋಪಿ ಪಡೆದಿದ್ದಾನೆ. ವಾರ ಕಳೆದ ನಂತರ ಗೌರಮ್ಮ ಹಣ ಕೊಡು ಎಂದು ಕೇಳಿದಾಗ ಕೊಡುತ್ತೇನೆ ಎಂದು ಸಬೂಬು ಹೇಳಿ ರಾತ್ರಿ ವೇಳೆ ವೃದ್ಧೆ ಮನೆಗೆ ಹೋಗಿ ಕಪಾಳಕ್ಕೆ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಮನೆಯ ಹಿಂದೆ ಇರುವ ಶೌಚಾಲಯದ ಯುಜಿಡಿ ಗುಂಡಿಗೆ ಹಾಕಿ ಪರಾರಿಯಾಗಿದ್ದು.
ವೃದ್ಧೆ ಕಾಣದಿರುವ ಬಗ್ಗೆ ಮಕ್ಕಳು ಹುಡುಕಾಟ ನಡೆಸಿದ್ದಾರೆ. ಇದೇ ವೇಳೆಯಲ್ಲಿ ವೀರಭದ್ರ ಕೂಡ ಗ್ರಾಮದಿಂದ ನಾಪತ್ತೆಯಾಗಿದ್ದ. ಅನುಮಾನಗೊಂಡ ಗೌರಮ್ಮನ ಮಕ್ಕಳು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ವೀರಭದ್ರ ಗ್ರಾಮಕ್ಕೆ ಬಂದ ನಂತರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಣಕ್ಕಾಗಿ ಗೌರಮ್ಮ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು, ಶವವನ್ನು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹಾಕಿರುವುದಾಗಿ ಹೇಳಿದ್ದಾನೆ ಎಂದು ತನಿಖೆಯಿಂದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಿಪ್ಪೂರು ಗ್ರಾಮಕ್ಕೆ ಈತನನ್ನು ಕರೆತಂದ ಪೊಲೀಸರು, ಶೌಚಾಲಯದ ಯುಜಿಡಿ ಗುಂಡಿಯೊಳಗಿಂದ ಗೌರಮ್ಮರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಕೊಲೆ ಆರೋಪಿ ವೀರಭದ್ರನನ್ನು ಪಟ್ಟಣದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಎಎಸ್‌ಪಿ ಮಲ್ಲಿಕ್, ಡಿವೈಎಸ್ಪಿ ಟಿ.ಬಿ. ರಾಜಣ್ಣ ತಿಪ್ಪೂರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಹೆಚ್ಚಿನ ಮಾಹಿತಿಯನ್ನು ಪಟ್ಟಣದ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರಿಂದ ಪಡೆದುಕೊಂಡರು ಎನ್ನಲಾಗಿದೆ.

















