ಚಿಕ್ಕಬಳ್ಳಾಪುರ (ಮೇ.11): ವೈದ್ಯರು ಮಾಡುವ ಎಡವಟ್ಟು ಒಂದೆರಡಲ್ಲ, ಇವರು ಮಾಡುವ ಸಮಸ್ಯೆಗಳಿಗೆ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ. ಇಂತಹದೇ ಅದೆಷ್ಟೋ ಪ್ರಕರಣಗಳು ಈಗ ಬೆಳಕಿದೆ ಬಂದಿದೆ. ಇದೀಗ ಚಿಕ್ಕಬಳ್ಳಾರಪುರದಲ್ಲಿ ಇಂತಹದೇ ಘಟನೆಯೊಂದು ನಡೆದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಮಾಡಿದ ಎಡವಟ್ಟಿನಿಂದ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯ ಮುಂದೆ ಮೃತದೇಹವನ್ನಿಟ್ಟು ಧರಣಿ ನಡೆಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಬಟ್ಲಹಳ್ಳಿ ಗ್ರಾಮದ ನಿವಾಸಿ ನರ್ಮದಾ ಜಿ.ಎನ್ (24) ಮೃತಪಟ್ಟ ದುರ್ದೈವಿ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಕುಟುಂಬ ನಿಯಂತ್ರಣಕ್ಕಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸ್ತ್ರೀರೋಗ ತಜ್ಞೆ ಡಾ. ವಾಣಿ ರೆಡ್ಡಿ ಅವರು ಆಕಸ್ಮಿಕವಾಗಿ ಸಣ್ಣ ಕರಳನ್ನು ಕತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ದೇಹದಲ್ಲಿ ಸೋಂಕು ಹರಡಿ ಚಿಕಿತ್ಸೆ ಫಲಿಸದೆ ನರ್ಮದಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ನೇರ ಕಾರಣ. ಶಸ್ತ್ರಚಿಕಿತ್ಸೆಯ ವೇಳೆ ಕರಳು ಕತ್ತರಿಸಿರುವುದನ್ನು ಮರೆಮಾಚಲಾಗಿತ್ತು ಎನ್ನಲಾಗಿದೆ.
ಈಗ ನರ್ಮದಾ ಸಾವಿಗೆ ಕಾರಣರಾದ ಡಾ. ವಾಣಿ ರೆಡ್ಡಿ ಮತ್ತು ಡಾ. ನಾರಾಯಣಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಟಿವಿ9 ಗೆ ಪ್ರತಿಕ್ರಿಯಿಸಿರುವ ಡಾ. ವಾಣಿ ರೆಡ್ಡಿ, “ನರ್ಮದಾ ಅವರ ಸಣ್ಣ ಕರಳು ಅಂಟಿಕೊಂಡಿತ್ತು, ಅದನ್ನು ಬಿಡಿಸುವಾಗ ಸ್ವಲ್ಪ ಹಾನಿಯಾಗಿತ್ತು . ಹಿರಿಯ ವೈದ್ಯ ಡಾ. ನಾರಾಯಣಸ್ವಾಮಿ ಮೂಲಕ ಕೂಡಲೇ ಚಿಕಿತ್ಸೆ ಕೊಡಿಸಲಾಗಿತ್ತು. ಮೂರು ದಿನದ ಹಿಂದೆ ಅವರು ಗುಣಮುಖರಾಗಿ ಮನೆಗೆ ಹೋಗಿದ್ದರು. ಮನೆಯಲ್ಲಿ ಏನಾಯಿತೋ ಗೊತ್ತಿಲ್ಲ, ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ” ಎಂದು ಹೇಳಿದ್ದಾರೆ. ಸದ್ಯ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮೃತ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಆಗ್ರಹ ಕೇಳಿಬಂದಿದೆ ಎನ್ನಲಾಗುತ್ತಿದೆ.
















