ಚಿತ್ರದುರ್ಗ : ಕಳೆದ ದಿನ ಕೊನೆಯುಸಿರೆಳೆದ ಸಚಿವ ಡಿ. ಸುಧಾಕರ್ ಅವರ ಪಾರ್ಥಿವ ಶರೀರ ಚಳ್ಳಕೆರೆಗೆ ಆಗಮಿಸಿದೆ. ಚಳ್ಳಕೆರೆಯ ಅವರ ನಿವಾಸದಲ್ಲಿ ಮೊದಲಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಮನೆ ಬಳಿಯಿಂದ ಆಂಬುಲೆನ್ಸ್ ಮೂಲಕ ಸ್ಟೇಡಿಯಂಗೆ ಶಿಫ್ಟ್ ಮಾಡಿದ್ದು, ಮಧ್ಯಾಹ್ನ 2 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಸುಧಾಕರ ಅವರ ಪಾರ್ಥಿವ ಶರೀರ ಸ್ಟೇಡಿಯಂನಿಂದ ಜೈನಧಾಮವರೆಗೆ ಮೆರವಣಿಗೆ ನಡೆಸಲಾಗುತ್ತದೆ. ತೆರೆದ ಲಾರಿಯಲ್ಲಿ ಪಾರ್ಥಿವ ಶರೀರದ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಧ್ಯಾಹ್ನ 3ಕ್ಕೆ ಸಿಎಂ ಸಿದ್ಧರಾಮಯ್ಯ, ಸುರ್ಜೆವಾಲ ಅವರು ಆಗಮಿಸಲಿದ್ದಾರೆ. ಮಧ್ಯಾಹ್ನ 4 ಗಂಟೆಗೆ ಪಾವಗಡ ರಸ್ತೆಯ ಜೈನ ಮುಕ್ತಿಧಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಅವರ ಪುತ್ರ ಸುಹಾಸ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮುಕ್ತಿಧಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಜೈನ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ. ಸುಧಾಕರ್ ಅವರ ಪಾರ್ಥಿವ ಶರೀರಕ್ಕೆ ಪುತ್ರ ಸುಹಾಸ್ ಅಗ್ನಿ ಸ್ಪರ್ಶಿಸಲಿದ್ದಾರೆ. ಅಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನ ಆಗಲಿದೆ. ಹಿರಿಯೂರಿನಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಮಾತನಾಡಿ, ‘ಆತ್ಮೀಯ ಸ್ನೇಹಿತ ಚಿಕ್ಕ ವಯಸ್ಸಿನಲ್ಲೇ ಕೊನೆಯುಸಿರೆಳೆಯುತ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಆಸ್ಪತ್ರೆಗೆ ಸೇರುವ ಮುನ್ನ ನನ್ನ ಕಾಲು ಸರಿ ಮಾಡಿಕೊಳ್ಳಬೇಕು ಅಂತ ದಾಖಲಾಗಿದ್ದರು. ಕೊನೆಗೆ ಶ್ವಾಸಕೋಶದ ಸೋಂಕು ತಗುಲಿದೆ ಎಂದು ಗೊತ್ತಾಯಿತು. ನಾವಿಬ್ಬರು ಚಿಕ್ಕ ವಯಸ್ಸಿನಿಂದ ತುಂಬಾ ಆತ್ಮೀಯ ಸ್ನೇಹಿತರು. ಮೊದಲು ಅವರ ಚಿಕ್ಕಪ್ಪ ಶಾಸಕರಾಗಿದ್ದರು. ಬಂಗಾರಪ್ಪನ ಕಾಲದಿಂದಲೂ ನಾನು ಇವರನ್ನ ಬಲ್ಲೆ. ರೈತರ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು.
ನಂತರ ಈ ಜಿಲ್ಲೆಯ ರೈತರ ಬದುಕಿಗೆ ಬದಲಾವಣೆ ತರಲು ಭದ್ರಾ ಮೇಲ್ದಂಡೆ ಯೋಜನೆ ಟ್ರಯಲ್ ರನ್ ಮಾಡಲು ಸಿದ್ದಮಾಡಿದ್ದರು’ ಎಂದಿದ್ದಾರೆ. ‘ಐದು ಜನ ಶಾಸಕರ ಜೊತೆ ಒಟ್ಟಿಗೆ ಬಂದು ಸಾಧನೆ ಮಾಡಿದ್ದಾರೆ. ಆದರೆ, ಉದ್ಘಾಟನೆ ಮಾಡಲು ಅವನಿಲ್ಲ. ನಮ್ಮ ಜೊತೆ ಸುಧಾಕರ್ ಇಲ್ಲ. ಅವರ ಸೇವೆ ಶಾಶ್ವತ. ನನಗಿಂತ ಒಂದು ವರ್ಷ ಚಿಕ್ಕವನು. ದೊಡ್ಡ ಸಮಾಜ ಇಲ್ಲದೇ ಹೋದರೂ ಎಲ್ಲರನ್ನೂ ಜೊತೆಗೆ ಕರ್ಕೊಂಡ್ ಹೋಗುತ್ತಿದ್ದ. ನಮ್ಮ ಪಕ್ಷ & ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ಮುಂದೆ ಅವರ ಕುಟುಂಬ ಅವರ ಚಿಂತನೆ ಮುಂದುವರೆಸುತ್ತಾರೆ. ಅವರ ಕುಟುಂಬದ ಜೊತೆ ನಾವು ನಿಲ್ಲುತ್ತೇವೆ. ಪಕ್ಷ & ಸರ್ಕಾರ ಮುಂದೆಯೂ ಅವರ ಜೊತೆ ನಿಲ್ಲುತ್ತೇವೆ. ರಂಗನಾಥ್ ಈ ಕ್ಷೇತ್ರದ ಹಿರಿಯ ನಾಯಕರು. ಅವರನ್ನ ಒಪ್ಪಿಸಿ ಕ್ಷೇತ್ರದಲ್ಲಿ ಕಣಕ್ಕಿಸಿದ್ದೆವು. ರೈತ ನಾಯಕನಾಗಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ.
















