ಕೊಪ್ಪಳ : ಸುಪ್ರಸಿದ್ಧ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಗೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ಮೌಲ್ಯದ ಚಿನ್ನದ ಆಭರಣಗಳು ಅಸಲಿಗೆ ಬಂಗಾರವೇ ಅಲ್ಲ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಹೀಗಾಗಿ ಆಭರಣ ಖರೀದಿಯ ಅಧಿಕೃತ ಬಿಲ್ ನೀಡುವಂತೆ ಜಿಲ್ಲಾಡಳಿತ ನೋಟಿಸ್ ಬೆನ್ನಲ್ಲೇ, ಇದೀಗ ಉದ್ಯಮಿ ಬಿಲ್ ಬಿಡುಗಡೆ ಮಾಡಿದ್ದು, ಆದರೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಲ್ಲಿಕೆಯಾದ ಬಿಲ್ನ ಪ್ರಕಾರ, 2026ರ ಎಪ್ರಿಲ್ 28ರಂದು ಹೈದರಾಬಾದ್ನ ತಿರುಮಾಲ್ ಜುವೆಲ್ಲರ್ಸ್ನಲ್ಲಿ 1400 ಗ್ರಾಂ ಚಿನ್ನವನ್ನು ಖರೀದಿಸಲಾಗಿದೆ. ಎಎಂಆರ್ ಕಂಪನಿ ಹೆಸರಿನಲ್ಲಿ ಬಿಡುಗಡೆಯಾಗಿರುವ ಬಿಲ್ನ ಮೊತ್ತ 2 ಕೋಟಿ 20 ಲಕ್ಷದ 42 ಸಾವಿರ ರೂಪಾಯಿ ಆಗಿದೆ. ಆದರೆ ಬಿಲ್ ಬಿಡುಗಡೆ ದಿನಾಂಕವನ್ನು ಏಪ್ರಿಲ್ 24 ಎಂದು ನಮೂದಿಸಲಾಗಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ.
ಸುಂದರ ಕಲಾಕೃತಿ ಹೊಂದಿರುವ ಪ್ರಭಾವಳಿ, ಚಕ್ರ, ಆಂಜನೇಯನ ಗದೇ ಸೇರಿ 12 ಆಭರಣಗಳನ್ನ ಮಹೇಶ್ ರೆಡ್ಡಿ ನೀಡಿದ್ದರು. ಬಂಗಾರ ಖರೀದಿಯ ಬಳಿಕ 08 ದಿನಗಳಲ್ಲಿ, ಇಷ್ಟೆಲ್ಲಾ ತಯಾರು ಮಾಡಲು ಹೇಗೆ ಸಾಧ್ಯವಾಯಿತು ಎನ್ನುವ ಅನುಮಾನ ಶುರುವಾಗಿದೆ. ಇನ್ನು ಜಿಲ್ಲಾಡಳಿತ ಇದನ್ನ ಪರಿಶೀಲನೆ ನಡೆಸಿದ ಬಳಿಕ, ಆಭರಣದಲ್ಲಿ 1400 ಗ್ರಾಂ ಬಂಗಾರ ಇರುವುದು ಪತ್ತೆಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಖಜಾನೆಗೆ ಆಭರಣಗಳನ್ನ ಜಮಾ ಮಾಡಿಕೊಂಡಿಲ್ಲ. ಇದು ಕೇವಲ ಪ್ರಚಾರದ ಗಿಮಿಕ್ಕಾ ಎಂಬ ಪ್ರಶ್ನೆ ಇದೀಗ ಭಕ್ತರಲ್ಲಿ ಮೂಡಿದೆ.
ಉದ್ಯಮಿ ಮಹೇಶ ರೆಡ್ಡಿ ಮೇ 08ರಂದು ಕಿಷ್ಕಿಂಧಾ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ಭರ್ಜರಿ ದೇಣಿಗೆ ನೀಡಿದ್ದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಗೆಳೆಯರೂ ಆಗಿರುವ ಮಹೇಶ ರೆಡ್ಡಿ, ಸ್ವಾಮಿಗೆ ಪ್ರಭಾವಳಿ, ಚಕ್ರ ಹಾಗೂ ಗದೆಯನ್ನು ದಾನವಾಗಿ ಅರ್ಪಿಸಿದ್ದರು. 2.50 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಎಂದು ಸ್ವತಃ ಜನಾರ್ದನ ರೆಡ್ಡಿ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ, ದೇಣಿಗೆ ಸ್ವೀಕರಿಸಿದ ಬಳಿಕ ಜಿಲ್ಲಾಡಳಿತ ಈ ಆಭರಣಗಳನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದಾಗ ಅಸಲಿ ಬಣ್ಣ ಬಯಲಾಗಿದೆ.
ತಜ್ಞರ ತಂಡ ಪರಿಶೀಲಿಸಿದಾಗ ಅಷ್ಟು ದೊಡ್ಡ ಆಭರಣಗಳಲ್ಲಿ ಇದ್ದದ್ದು ಕೇವಲ 250 ರಿಂದ 300 ಗ್ರಾಂ ಬಂಗಾರ ಮಾತ್ರ. ಕೋಟಿ ಬೆಲೆ ಬಾಳುತ್ತದೆ ಎಂದು ಹೇಳಲಾದ ಆಭರಣಗಳು ಅಸಲಿಗೆ ತಾಮ್ರದ ಮೇಲೆ ಬಂಗಾರದ ಲೇಪನ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪರೀಶಿಲನೆ ವೇಳೆ ಬಯಲು ಮಾಡಿತ್ತು.
















