ಮನೆ ಸುದ್ದಿ ಜಾಲ ಲೋಕಲ್ ಎಣ್ಣೆ ಶೇ.20 ಹೆಚ್ಚಳ, ಶ್ರೀಮಂತರ ಬ್ರ್ಯಾಂಡ್‌ಗಳ ದರ ಕಡಿಮೆ : ಹೊಸ ಅಬಕಾರಿ ನೀತಿ...

ಲೋಕಲ್ ಎಣ್ಣೆ ಶೇ.20 ಹೆಚ್ಚಳ, ಶ್ರೀಮಂತರ ಬ್ರ್ಯಾಂಡ್‌ಗಳ ದರ ಕಡಿಮೆ : ಹೊಸ ಅಬಕಾರಿ ನೀತಿ ಜಾರಿ

0

ಕರ್ನಾಟಕದ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಬಡ ಕುಡುಕರಿಗೆ ಕಹಿ ಮತ್ತು ಬ್ರ್ಯಾಂಡೆಡ್ ಎಣ್ಣೆ ಕುಡಿಯುವ ಶ್ರೀಮಂತರಿಗೆ ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯದ ಹೊಸ ಅಬಕಾರಿ ನೀತಿಯು ಸೋಮವಾರದಿಂದ ಜಾರಿಗೆ ಬಂದಿದ್ದು, ಮದ್ಯದ ಬೆಲೆಗಳಲ್ಲಿ ಭಾರಿ ಬದಲಾವಣೆಯಾಗಲಿದೆ. ಈ ಹೊಸ ನೀತಿಯ ಅಡಿಯಲ್ಲಿ ಸಾಮಾನ್ಯ ಜನರು ಬಳಸುವ ಕಡಿಮೆ ಬೆಲೆಯ ಮದ್ಯದ ದರ ಗಣನೀಯವಾಗಿ ಏರಿಕೆಯಾಗಲಿದ್ದರೆ, ಪ್ರೀಮಿಯಂ ಅಥವಾ ಐಷಾರಾಮಿ ಬ್ರ್ಯಾಂಡ್‌ಗಳ ಬೆಲೆ ತಗ್ಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಈ ಕುರಿತು ಕರ್ನಾಟಕ ಸರ್ಕಾರವು ದಶಕಗಳ ಹಳೆಯ ‘ಬಲ್ಕ್ ಲೀಟರ್’ ಆಧಾರಿತ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ‘ಆಲ್ಕೋಹಾಲ್ ಪ್ರಮಾಣ’ದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಮೇ 11 ರಿಂದ ಜಾರಿಗೆ ಬಂದಿರುವ ‘ಕರ್ನಾಟಕ ಅಬಕಾರಿ  ನಿಯಮಗಳು, 2024’ ರ ಅಡಿಯಲ್ಲಿ ಈ ಬದಲಾವಣೆ ತರಲಾಗಿದೆ. 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಐದನೇ ಅಬಕಾರಿ ದರ ಪರಿಷ್ಕರಣೆಯಾಗಿದೆ. ಹೊಸ ನೀತಿಯಲ್ಲಿ ಸರ್ಕಾರವು ಅಬಕಾರಿ ಸ್ಲ್ಯಾಬ್‌ಗಳ ಸಂಖ್ಯೆಯನ್ನು 16 ರಿಂದ 8 ಕ್ಕೆ ಇಳಿಸಿದೆ. ಈ ಸರಳೀಕರಣವು ತೆರಿಗೆ ವ್ಯವಸ್ಥೆಯನ್ನು ಸುಲಭಗೊಳಿಸಿದರೂ, ಇದರ ನೇರ ಹೊಡೆತ ಬೀಳುವುದು ಬಜೆಟ್ ಅಥವಾ ಅಗ್ಗದ ದರದ ಮದ್ಯವನ್ನು ಖರೀದಿಸುವ ಗ್ರಾಹಕರ ಮೇಲೆ. ಮುಖ್ಯವಾಗಿ 180 ಮಿ.ಲೀ ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳ ಬೆಲೆ ಏರಿಕೆಯಾಗಲಿದೆ ಎನ್ನಬಹುದು.

ಹಾಗೂ ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಪ್ರಕಾರ, ಮೊದಲ ಐದು ಸ್ಲ್ಯಾಬ್‌ಗಳಲ್ಲಿ ಬರುವ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. 20 ರಿಂದ 30 ರಷ್ಟು ಹೆಚ್ಚಿಸಲಾಗಿದೆ. ರಾಜ್ಯದ ಒಟ್ಟು ಅಬಕಾರಿ ಆದಾಯದಲ್ಲಿ ಈ ಐದು ಸ್ಲ್ಯಾಬ್‌ಗಳ ಪಾತ್ರವೇ ಶೇ. 70-75 ರಷ್ಟಿದೆ. ಸಾಮಾನ್ಯ ಮದ್ಯದ ಬೆಲೆ ಏರುತ್ತಿದ್ದರೆ, ದುಬಾರಿ ಅಥವಾ ಪ್ರೀಮಿಯಂ ಬ್ರ್ಯಾಂಡ್‌ಗಳಾದ ವಿಸ್ಕಿ, ರಮ್ ಮತ್ತು ವೋಡ್ಕಾಗಳ ಬೆಲೆ ಶೇ. 16 ರಿಂದ 20 ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್, ಯುನೈಟೆಡ್ ಸ್ಪಿರಿಟ್ಸ್ ನಂತಹ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳು 6 ರಿಂದ 8 ನೇ ಸ್ಲ್ಯಾಬ್‌ನಲ್ಲಿ ಬರುತ್ತವೆ. ಇವುಗಳ ಮೇಲಿನ ಅಬಕಾರಿ ಸುಂಕವನ್ನು ಶೇ. 10-15 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಶ್ರೀಮಂತ ಗ್ರಾಹಕರಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಈ ನೀತಿ ವರದಾನವಾಗಲಿದೆ. ಆದರಿಂದ ಸರ್ಕಾರದ ಈ ನಿರ್ಧಾರವನ್ನು ಸ್ಥಳೀಯ ಮದ್ಯ ತಯಾರಕರು ತೀವ್ರವಾಗಿ ಟೀಕಿಸಿದ್ದಾರೆ. ‘ಈ ನೀತಿಯು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ರೂಪಿಸಿದಂತಿದೆ. ಸ್ಥಳೀಯ ಸಣ್ಣ ತಯಾರಕರು ಬಜೆಟ್ ಮದ್ಯದ ಮೇಲೆ ಅವಲಂಬಿತರಾಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಮಾರಾಟ ಕುಸಿದರೆ, ಸ್ಥಳೀಯ ಘಟಕಗಳು ಮುಚ್ಚುವ ಭೀತಿ ಎದುರಾಗಲಿದೆ’ ಎಂದು ದೂರಿದ್ದಾರೆ ಎನ್ನಲಾಗುತ್ತಿದೆ.