ಚೆನ್ನೈ(ತಮಿಳುನಾಡು): ಮೊದಲ ಚುನಾವಣೆಯಲ್ಲೇ ಅಭೂತಪೂರ್ವ ಬೆಂಬಲದೊಂದಿಗೆ ತಮಿಳುನಾಡು ವಿಧಾನಸಭೆಯಲ್ಲಿ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸಫಲವಾದ ತಮಿಳಿಗ ವೆಟ್ರಿ ಕಳಗಂ ಮಿತ್ರ ಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚಿಸಿದೆ. ಸಿಎಂ ಆಗಿ ಪ್ರಮಾಣವಚನ ಕೈಗೊಂಡ ಬೆನ್ನಲ್ಲೇ ಸಿಎಂ ವಿಜಯ್ ಹಲವು ಪ್ರಮುಖ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಬಹುದಾಗಿದೆ.
ಈ ಕುರಿತು ಟಿವಿಕೆ ಪಕ್ಷ, ತಮ್ಮ ಬೆಂಬಲಿಗರಿಗೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವಂತಹ ಯಾವುದೇ ಘಟನೆಗಳು ಪಕ್ಷದ ಬೆಂಬಲಿಗರಿಂದ ಆದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಬ್ಯಾನರ್, ಫಲಕಗಳ ಅಳವಡಿಕೆಗಳನ್ನು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರೊಂದಿಗೆ ಜನರ ಕಲ್ಯಾಣ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದೆ. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ, ಸಚಿವ ಎನ್. ಆನಂದ್, ಸಾರ್ವಜನಿಕರಿಗೆ ತೊಂದರೆ ನೀಡುವ, ನಿಯಮಗಳನ್ನು ಉಲ್ಲಂಘಿಸುವ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಆದೇಶವು ಪಕ್ಷದ ಅಧ್ಯಕ್ಷರ ಸ್ಪಷ್ಟ ಒಪ್ಪಿಗೆ ಹೊಂದಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

















