ಮನೆ ರಾಜ್ಯ ಜನನಾಯಗನ್‌ಗೆ ಇಂದು ನಿರ್ಣಾಯಕ ದಿನ – ವಿಶ್ವಾಸಮತ ಅಗ್ನಿಪರೀಕ್ಷೆ ಗೆಲ್ತಾರಾ ವಿಜಯ್

ಜನನಾಯಗನ್‌ಗೆ ಇಂದು ನಿರ್ಣಾಯಕ ದಿನ – ವಿಶ್ವಾಸಮತ ಅಗ್ನಿಪರೀಕ್ಷೆ ಗೆಲ್ತಾರಾ ವಿಜಯ್

0

ಚೆನ್ನೈ : ಮುಖ್ಯಮಂತ್ರಿಯಾಗಲು ಬಹುಮತದ ಕೊರತೆ ಎದುರಿಸಿ ಕಡೆಗೂ ಹತ್ತಾರು ಸರ್ಕಸ್ ಮಾಡಿ ಸರ್ಕಾರ ರಚನೆ ಮಾಡಿದ್ದ ದಳಪತಿ ವಿಜಯ್‌ಗೆ ಇಂದು ನಿರ್ಣಾಯಕ ದಿನ. ತಮಿಳುನಾಡು ವಿಧಾನಸಭೆಯಲ್ಲಿ ಇಂದು ಬಹುಮತ ಸಾಬೀತು ಮಾಡಬೇಕಿದ್ದು, ಜನನಾಯಗನ್ ನಿಜಕ್ಕೂ ಇಂದು ರಾಜಕೀಯ ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಮೂಲಕ ದೇಶದ ಗಮನ ಸೆಳೆದಿದ್ದ ಮುಖ್ಯಮಂತ್ರಿ ವಿಜಯ್‌ಗೆ ಇಂದು ಅತಂತ್ಯ ನಿರ್ಣಾಯಕ ದಿನ. ಹತ್ತಾರು ಸರ್ಕಸ್ ಮಾಡಿ ಸರ್ಕಾರ ರಚನೆ ಮಾಡಿದ್ದ ದಳಪತಿ ಈಗ ವಿಧಾನಸಭೆಯಲ್ಲಿ ತಮ್ಮ ಸರ್ಕಾರಕ್ಕಿರುವ ಬೆಂಬಲವನ್ನು ಸಾಬೀತು ಮಾಡಬೇಕಿದೆ.

234 ಶಾಸಕರನ್ನು ಹೊಂದಿರುವ ವಿಧಾನಸಭೆಯಲ್ಲಿ ವಿಜಯ್ ಇಂದು ಬಹುಮತ ಸಾಬೀತು ಮಾಡಬೇಕಿದೆ. ಮ್ಯಾಜಿಕ್ ನಂಬರ್ 118 ಆಗಿದ್ದು, ಈ ಸಂಖ್ಯೆಗೆ ಅನುಗುಣವಾಗಿ ಬೆಂಬಲ ಸಾಬೀತುಪಡಿಸಬೇಕಿತ್ತು. ವಿಜಯ್ ತಿರುಚಿ ಪಶ್ಚಿಮ ಮತ್ತು ಪೆರಂಬೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಹಿನ್ನೆಲೆ ಅದನ್ನು ಒಂದು ಎಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ತಿರುಪತ್ತೂರು ಟಿವಿಕೆ ಶಾಸಕ ಶ್ರೀನಿವಾಸ್ ಸೇತುಪತಿ ಅವರಿಗೆ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆ ವಿಧಾನಸಭೆಯ ಬಲ 232ಕ್ಕೆ ಇಳಿದಿದ್ದು, ಬಹುಮತಕ್ಕೆ 116 ಶಾಸಕರ ಬೆಂಬಲ ಅಗತ್ಯವಿದೆ.

ಅಲ್ಲಿಗೆ ವಿಜಯ್‌ 116ರ ಮ್ಯಾಜಿಕ್ ನಂಬರ್ ಅನ್ನು ಸುಲಭವಾಗಿ ಕ್ರಾಸ್ ಮಾಡಲಿದ್ದಾರೆ. ಈಗಾಗಲೇ ವಿಜಯ್ ಬಹುಮತ ಸಾಬೀತುಪಡಿಸಲು ಬೇಕಾದ ಶಾಸಕರ ಬೆಂಬಲ ಹೊಂದಿದ್ದಾರೆ. ಈ ನಡುವೆ ಬೋನಸ್ ಎನ್ನುವಂತೆ ಶಾಸಕರಾದ ವೇಲುಮಣಿ-ಷಣ್ಮುಗಂ ನೇತೃತ್ವದ ಎಐಎಡಿಎಂಕೆ ಬಣವು ಆಡಳಿತಾರೂಢ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿ.ವಿ. ಷಣ್ಮುಗಂ, ವಿಜಯ್ ಮುಖ್ಯಮಂತ್ರಿ ಆಗಬೇಕು ಎಂಬುದು ಜನಾದೇಶವಾಗಿದೆ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಜನಾದೇಶವನ್ನು ನಾವು ಗೌರವಿಸುತ್ತೇವೆ. ಎಐಎಡಿಎಂಕೆ ಪಕ್ಷದ ಪರವಾಗಿ ನಾವು ಟಿವಿಕೆ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. 47 ಅಣ್ಣಾ ಡಿಎಂಕೆ ಶಾಸಕರ ಪೈಕಿ ಸುಮಾರು 30 ಮಂದಿ ಶಾಸಕರು ಬೆಂಬಲ ನೀಡಲಿದ್ದಾರೆ ಎನ್ನಲಾಗಿದ್ದು, ಅಲ್ಲಿಗೆ ವಿಜಯ್ ಸರ್ಕಾರಕ್ಕೆ 149 ಶಾಸಕರ ಬೆಂಬಲ ಸಿಗಲಿದೆ. ಹೀಗಾಗೀ ದಳಪತಿ ವಿಜಯ್ ಆನೆ ಬಲದೊಂದಿಗೆ ಬಹುಮತ ಸಾಬೀತುಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಹುಮತದ ಅಗ್ನಿಪರೀಕ್ಷೆ ಮುಗಿದ ಬಳಿಕ ವಿಜಯ್ ಅಸಲಿ ಆಡಳಿತ ಶುರುವಾಗಲಿದೆ ಎನ್ನಲಾಗುತ್ತಿದೆ.