ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಖದೀಮರ ಆಟಾಟೋಪಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಡ್ರಗ್ಸ್ ಮಾಫಿಯಾ ವಿರುದ್ಧ ಮಲ್ಲೇಶ್ವರಂ ಮತ್ತು ಅಶೋಕನಗರ ಪೊಲೀಸರು ಸಮರ ಸಾರಿದ್ರೆ, ಇತ್ತ ಸದ್ದಿಲ್ಲದೆ ಮನೆಗಳ್ಳತನ ಮಾಡುತ್ತಿದ್ದ ರಾಜಸ್ತಾನಿ ಗ್ಯಾಂಗ್ ಹಾಗೂ ಮದ್ದೂರಿನ ಕುಖ್ಯಾತ ಕಳ್ಳನನ್ನ ಖಾಕಿ ಪಡೆ ಹೆಡೆಮುರಿ ಕಟ್ಟಿದೆ. ಮತ್ತೊಂದು ಕಡೆ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿದ ಗ್ಯಾಂಗ್ ಸಹ ಅಂದರ್ ಆಗಿದ್ದು ಬೆಂಗಳೂರಿನಲ್ಲಿ ಹೈಡ್ರೋಗಾಂಜಾ ಹಾವಳಿ ಮಿತಿಮೀರಿದ್ದು,ಪೊಲೀಸರು ಸಾಲು ಸಾಲು ಕಾರ್ಯಾಚರಣೆ ನಡೆಸಿದ್ದಾರೆ. ಮಲ್ಲೇಶ್ವರಂ ಪೊಲೀಸರು ಕೇರಳ ಮೂಲದ ಮೊಹಮ್ಮದ್ ಅಫ್ರನ್, ಸಬೀತ್ ಮತ್ತು ಶ್ರೀನಾಥ್ ಎಂಬ ಮೂವರು ಪೆಡ್ಲರ್‌ಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿ, 464 ಗ್ರಾಂ ಹೈಡ್ರೋಗಾಂಜಾ ವಶಪಡಿಸಿಕೊಂಡಿದ್ದಾರೆ. ಇತ್ತ ಅಶೋಕನಗರ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಕೇರಳದಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ಮೊಹಮ್ಮದ್ ಹಮ್ಜಾ ಮತ್ತು ಯಾಸೀರ್ ಅಹಮದ್‌ನನ್ನು ಬಂಧಿಸಿದ್ದಾರೆ ಎಂಉ ತಿಳಿದುಬಂದಿದೆ.
ಆರೋಪಿಗಳಿಂದ ಬರೋಬ್ಬರಿ 1 ಕೋಟಿ 5 ಲಕ್ಷ ರೂಪಾಯಿ ಮೌಲ್ಯದ 3 ಕೆಜಿ 222 ಗ್ರಾಂ ಹೈಡ್ರೋಗಾಂಜಾವನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೂ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ರಾಜಸ್ತಾನಿ ಗ್ಯಾಂಗ್ ಈಗ ಕೆ.ಆರ್.ಪುರಂ ಪೊಲೀಸರ ಅತಿಥಿಯಾಗಿದೆ. ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಗೋಪಾಲ್ ಮತ್ತು ನಾಗೇಂದ್ರ ಸಹಾನಿ, ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇವರಿಂದ 40 ಲಕ್ಷ ಮೌಲ್ಯದ 196 ಗ್ರಾಂ ಚಿನ್ನ ಹಾಗೂ 1 ಕೆಜಿಗೂ ಅಧಿಕ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದೆಡೆ ಮದ್ದೂರಿನಿಂದ ಪ್ರತಿ ಸಂಜೆ ಬೆಂಗಳೂರಿಗೆ ಬಂದು, ರಾತ್ರಿ ಮನೆಗಳ್ಳತನ ಮಾಡಿ ಬೆಳಗಾಗುವುದರೊಳಗೆ ಊರು ಸೇರುತ್ತಿದ್ದ ಮಹೇಶ್ ಗೌಡ @ ಆನಂದ್ ಎಂಬ ಖದೀಮನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಹಾಗೂ ಮೋಜು ಮಸ್ತಿಗಾಗಿ ಕಳ್ಳತನ ಮಾಡುತ್ತಿದ್ದ ಈತನಿಂದ 317 ಗ್ರಾಂ ಚಿನ್ನ ಹಾಗೂ 2.5 ಕೆಜಿ ಬೆಳ್ಳಿಯನ್ನು ಇನ್ಸ್‌ಪೆಕ್ಟರ್ ಪಾಪಣ್ಣ ತಂಡ ಜಪ್ತಿ ಮಾಡಿದೆ. ಇತ್ತ ತುಮಕೂರಿನಿಂದ ಬೆಂಗಳೂರಿಗೆ ಜಿಂಕೆ ಕೊಂಬುಗಳನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮುರಳಿ, ಮಂಜುನಾಥ್ ಮತ್ತು ಕಾರ್ಯಪ್ಪ ಎಂಬುವವರನ್ನು ಸಿಸಿಬಿ ಹಾಗೂ ಚಿಕ್ಕಬಾಣಾವಾರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ.
















