ತಿರುವುನಂತಪುರ (Thiruvananthapuram): ಕಚ್ಚಾ ಬಾಂಬ್ ಒಂದು ಸ್ಫೋಟಗೊಂಡ ಪರಿಣಾಮ ತಂದೆ ಮತ್ತು ಮಗ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.
ಫೈಝಲ್ ಖಾನ್ (45) ಮತ್ತು ಅವರ ಪುತ್ರ ಶಾಹೀದುಲ್ (22) ಮೃತಪಟ್ಟವರು. ಕೇರಳದ ಕಣ್ಣೂರಿನಲ್ಲಿ ಮನೆಯೊಂದರಲ್ಲಿ ಸ್ಪೋಟ ಸಂಭವಿಸಿದೆ. ಇವರು ಅಸ್ಸಾಂನವರಾಗಿದ್ದು, ಕಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಗುಜರಿ ಹೆಕ್ಕಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಫೈಝಲ್ ಖಾನ್, ತಮಗೆ ದೊರೆತಿದ್ದ ಸ್ಟೀಲ್ ಡಬ್ಬವೊಂದನ್ನು ಮನೆಗೆ ತಂದು ತೆರೆದಾಗ ಅದು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಿಂದಾಗಿ ಮನೆಯ ಛಾವಣಿ ಕೂಡ ಛಿದ್ರಗೊಂಡಿದೆ. ಸ್ಫೋಟಕದಲ್ಲಿ ಏನು ಬಳಸಲಾಗಿತ್ತು ಮತ್ತು ಅದು ಎಲ್ಲಿಂದ ಲಭ್ಯವಾಗಿತ್ತು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.