ಮನೆ ಸುದ್ದಿ ಜಾಲ NEET UG 2026 ಮರು ಪರೀಕ್ಷೆ: ಹೊಸ ನೋಂದಣಿ ಬೇಡ, ವಿದ್ಯಾರ್ಥಿಗಳ ಖಾತೆಗೆ ವಾಪಾಸ್ ಬರಲಿದೆ...

NEET UG 2026 ಮರು ಪರೀಕ್ಷೆ: ಹೊಸ ನೋಂದಣಿ ಬೇಡ, ವಿದ್ಯಾರ್ಥಿಗಳ ಖಾತೆಗೆ ವಾಪಾಸ್ ಬರಲಿದೆ ಅಂದಾಜು 360 ಕೋಟಿ ರೂ.!

0

ಬೆಂಗಳೂರು: ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG 2026 ರದ್ದು ಆದ ನಂತರ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಭಾರೀ ಗೊಂದಲ ಮತ್ತು ಆತಂಕ ಉಂಟಾಗಿತ್ತು. ಮೇ 3, 2026ರಂದು ನಡೆದ ಪರೀಕ್ಷೆ ರದ್ದಾದ ಬಳಿಕ ಸುಮಾರು 22.79 ಲಕ್ಷ ವೈದ್ಯಕೀಯ ಆಕಾಂಕ್ಷಿಗಳು ಮುಂದೇನು ಎಂಬ ಪ್ರಶ್ನೆಯಲ್ಲಿ ಮುಳುಗಿದ್ದರು. “ಮತ್ತೆ ಅರ್ಜಿ ಸಲ್ಲಿಸಬೇಕಾ?”, “ಮತ್ತೆ ಪರೀಕ್ಷಾ ಶುಲ್ಕ ಪಾವತಿಸಬೇಕಾ?”, “ಹಳೆಯ ಅರ್ಜಿ ಮಾನ್ಯವಾಗುತ್ತದೆಯೇ?” ಎಂಬ ಅನೇಕ ಪ್ರಶ್ನೆಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕಾಡುತ್ತಿದವು. ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ NTA ನೀಡಿರುವ ಮಹತ್ವದ ಪ್ರಕಟಣೆ ಎಲ್ಲ ಆತಂಕಗಳಿಗೆ ತೆರೆ ಎಳೆದಿದೆ.

ಮೇ 12, 2026ರಂದು NTA ತನ್ನ ಅಧಿಕೃತ ವೆಬ್ಸೈಟ್ ಗಳಾದ neet.nta.nic.in ಮತ್ತು nta.ac.in ನಲ್ಲಿ ಪ್ರಕಟಣೆ ಹೊರಡಿಸಿ, NEET UG 2026 ಮರು ಪರೀಕ್ಷೆಗೆ ಹೊಸದಾಗಿ ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ಫೆಬ್ರವರಿ 8, 2026ರಿಂದ ಮಾರ್ಚ್ 11, 2026ರವರೆಗೆ ನಡೆದ ನೋಂದಣಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಸಲ್ಲಿಸಿದ ಎಲ್ಲಾ ವಿವರಗಳು ಮರು ಪರೀಕ್ಷೆಗೂ ಮಾನ್ಯವಾಗಿರುತ್ತವೆ ಎಂದು ತಿಳಿಸಿದೆ.

ವಿದ್ಯಾರ್ಥಿಗಳು ಈಗಾಗಲೇ ಅಪ್ ಲೋಡ್ ಮಾಡಿರುವ ದಾಖಲೆಗಳು, ವೈಯಕ್ತಿಕ ಮಾಹಿತಿ, ಪರೀಕ್ಷಾ ಕೇಂದ್ರ ಆಯ್ಕೆ ಸೇರಿದಂತೆ ಎಲ್ಲ ಅರ್ಜಿ ವಿವರಗಳನ್ನು ಮತ್ತೆ ಸಲ್ಲಿಸುವ ಅವಶ್ಯಕತೆ ಇಲ್ಲ. ಮರು ಪರೀಕ್ಷೆಗೆ ಹೊಸ ಪ್ರವೇಶ ಪತ್ರ ಮಾತ್ರ ಬಿಡುಗಡೆ ಮಾಡಲಾಗುತ್ತದೆ ಎಂದು NTA ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅರ್ಜಿ ಪ್ರಕ್ರಿಯೆಯ ಒತ್ತಡ ತಪ್ಪಿದಂತಾಗಿದೆ.

ಇದೇ ವೇಳೆ, ಮೇ 2026ರಲ್ಲಿ ನೋಂದಾಯಿಸಿಕೊಂಡಿದ್ದರೂ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಮರು ಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು NTA ಘೋಷಿಸಿದೆ. ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯ ವೆಚ್ಚವನ್ನು NTA ತನ್ನ ಸ್ವಂತ ಖರ್ಚಿನಲ್ಲಿ ನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

ಇನ್ನೊಂದು ಪ್ರಮುಖ ವಿಷಯವೆಂದರೆ, ಈಗಾಗಲೇ ರದ್ದಾದ ಮೇ 3ರ ಪರೀಕ್ಷೆಗೆ ವಿದ್ಯಾರ್ಥಿಗಳು ಪಾವತಿಸಿದ್ದ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ. ಸುಮಾರು 1000 ರಿಂದ 1700 ರೂಪಾಯಿವರೆಗೆ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಲಾಗಿದ್ದು, ಒಟ್ಟು ಅಂದಾಜು 360 ಕೋಟಿ ರೂಪಾಯಿ NTA ಖಾತೆಗೆ ಜಮೆಯಾಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಆ ಮೊತ್ತವನ್ನು ವಿದ್ಯಾರ್ಥಿಗಳ ಖಾತೆಗೆ ವಾಪಾಸ್ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ.

ಆದರೆ ರಿಫಂಡ್ ಯಾವ ದಿನಾಂಕದಿಂದ ಪ್ರಾರಂಭವಾಗುತ್ತದೆ ಹಾಗೂ ಹಣ ಮರುಪಾವತಿ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಪ್ರತ್ಯೇಕ ಮಾಹಿತಿ ನೀಡಲಾಗುತ್ತದೆ ಎಂದು NTA ಹೇಳಿದೆ.

ಈ ನಡುವೆ, ಕೆಲವು ಕೋಚಿಂಗ್ ಸಂಸ್ಥೆಗಳು ಮತ್ತು ಮಧ್ಯವರ್ತಿಗಳು “ಮರು ನೋಂದಣಿ ಮಾಡಿಸಿಕೊಡುತ್ತೇವೆ” ಎಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಇಂತಹವರನ್ನು ನಂಬಬಾರದು ಎಂದು NTA ಕಟ್ಟುನಿಟ್ಟಾಗಿ ಸೂಚಿಸಿದೆ. ಮರು ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆ ಉಚಿತವಾಗಿದ್ದು, ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಹಣ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ವದಂತಿಗಳನ್ನು ನಂಬಬಾರದು ಎಂದು NTA ಮನವಿ ಮಾಡಿದೆ. ಮರು ಪರೀಕ್ಷೆಯ ದಿನಾಂಕ, ಹಾಲ್ ಟಿಕೆಟ್ ಬಿಡುಗಡೆ, ಪರೀಕ್ಷಾ ಕೇಂದ್ರ ಮಾಹಿತಿ ಸೇರಿದಂತೆ ಎಲ್ಲಾ ಅಧಿಕೃತ ಮಾಹಿತಿಯನ್ನು ಕೇವಲ neet.nta.nic.in ಮತ್ತು nta.ac.in ವೆಬ್ಸೈಟ್ ಗಳಿಂದ ಮಾತ್ರ ಪರಿಶೀಲಿಸಬೇಕು ಎಂದು ತಿಳಿಸಿದೆ.

ಹೆಚ್ಚುವರಿ ಮಾಹಿತಿಗಾಗಿ ವಿದ್ಯಾರ್ಥಿಗಳು neet-ug@nta.ac.in ಇಮೇಲ್ ಮೂಲಕ ಸಂಪರ್ಕಿಸಬಹುದು ಅಥವಾ 011-40759000 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಪರೀಕ್ಷೆಯ ಪಠ್ಯಕ್ರಮ ಮತ್ತು ಪ್ರಶ್ನೆ ಮಾದರಿಯಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗದೆ ತಮ್ಮ ತಯಾರಿಯನ್ನು ಮುಂದುವರಿಸಬೇಕು ಎಂದು NTA ಸಲಹೆ ನೀಡಿದೆ.