ಆಂಧ್ರಪ್ರದೇಶ: ಆಂಧ್ರಪ್ರದೇಶದ ಕಡಪದಲ್ಲಿ ನಡೆದ ಒಂದು ಭೀಕರ ಘಟನೆ ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಪತಿ ಪತ್ನಿಯರ ನಡುವಿನ ವೈಯಕ್ತಿಕ ಕಲಹ ಎಷ್ಟರ ಮಟ್ಟಿಗೆ ಹಿಂಸಾತ್ಮಕ ರೂಪ ಪಡೆಯಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಹೆಂಡತಿ ತನ್ನ ದೇಹದ ಬೊಜ್ಜು, ಲುಕ್ ಹಾಗೂ ಜೀವನ ಶೈಲಿಯ ಬಗ್ಗೆ ಗಮನ ಕೊಡುತ್ತಿಲ್ಲ ಎಂಬ ಕಾರಣ ಹೇಳಿ ಗಂಡನೇ ಪತ್ನಿಗೆ ವಿಷ ನೀಡಿ ಕೊಲೆ ಮಾಡಿರುವ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.
ಕಡಪ ಜಿಲ್ಲೆಯ ಬದ್ರಿಪಲ್ಲಿ ಕಿರಣ್ ಕುಮಾರ್ ಎಂಬ ವ್ಯಕ್ತಿ ತನ್ನ 31 ವರ್ಷದ ಪತ್ನಿ ಪದ್ಮಜಾ ಅವರನ್ನು ವಿಷ ನೀಡಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಆರಂಭದಲ್ಲಿ ಈ ಪ್ರಕರಣ ಸಹಜ ಸಾವು ಎಂದು ಕಾಣಿಸಿಕೊಂಡಿದ್ದರೂ, ನಂತರ ನಡೆದ ಪೊಲೀಸ್ ತನಿಖೆಯಲ್ಲಿ ಹಲವು ಶಾಕಿಂಗ್ ಸಂಗತಿಗಳು ಬೆಳಕಿಗೆ ಬಂದಿವೆ. ಪತ್ನಿಯ ಬಗ್ಗೆ ಅಸಮಾಧಾನ ಹೊಂದಿದ್ದ ಗಂಡ, ಆಕೆಯ ರೂಪ, ಬೊಜ್ಜು ಹಾಗೂ ಜೀವನ ಶೈಲಿ ಕುರಿತು ಆಗಾಗ್ಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಪದ್ಮಜಾ ಅವರು ದೇಹದ ತೂಕ ಹೆಚ್ಚಾಗುತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕಿರಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ಮನೆದಲ್ಲಿ ಸದಾ ನೈಟಿ ಧರಿಸಿಕೊಂಡೇ ಓಡಾಡುತ್ತಾಳೆ, ತನ್ನ ಲುಕ್ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ಗಂಡ ಆಕೆಯ ಮೇಲೆ ಕೋಪ ಹೊಂದಿದ್ದ ಎಂದು ತಿಳಿದು ಬಂದಿದೆ. ಈ ವಿಚಾರವೇ ಕೊನೆಗೆ ಕೊಲೆ ಮಟ್ಟಕ್ಕೆ ತಲುಪಿರುವುದು ಎಲ್ಲರನ್ನೂ ಶಾಕ್ ಗೆ ಗುರಿ ಮಾಡಿದೆ.
ಆದರೆ ಪ್ರಕರಣದ ತನಿಖೆ ಮುಂದುವರಿದಂತೆ ಮತ್ತೊಂದು ಸತ್ಯ ಹೊರಬಂದಿದೆ. ಕಿರಣ್ ಕುಮಾರ್ ಗೆ ಅಕ್ರಮ ಸಂಬಂಧ ಇತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಪತ್ನಿ ಪದ್ಮಜಾ ಇದನ್ನು ವಿರೋಧಿಸುತ್ತಿದ್ದಳು. ಇದೇ ಕಾರಣದಿಂದ ಇಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೊನೆಗೆ ಪತ್ನಿಯನ್ನು ದಾರಿಯಿಂದ ತೆಗೆದು ಹಾಕಲು ಗಂಡ ವಿಷ ನೀಡಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸಮಾಜದಲ್ಲಿ ಪತಿ ಪತ್ನಿಯರ ಸಂಬಂಧ ಯಾವ ಮಟ್ಟಿಗೆ ಬದಲಾಗುತ್ತಿದೆ ಎಂಬ ಪ್ರಶ್ನೆ ಮೂಡಿಸಿದೆ. ಸಣ್ಣ ಸಣ್ಣ ವಿಚಾರಗಳಿಗೂ ಹಿಂಸೆ, ಕೊಲೆ, ಆತ್ಮಹತ್ಯೆ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವೈವಾಹಿಕ ಜೀವನದಲ್ಲಿ ಸಂಭಾಷಣೆ, ಸಹನೆ ಮತ್ತು ಪರಸ್ಪರ ಗೌರವ ಕಡಿಮೆಯಾಗುತ್ತಿರುವ ಬಗ್ಗೆ ಸಮಾಜ ವಿಜ್ಞಾನಿಗಳು ಕೂಡ ಚಿಂತನೆ ವ್ಯಕ್ತಪಡಿಸುತ್ತಿದ್ದಾರೆ.
ಇದೇ ರೀತಿಯ ಮತ್ತೊಂದು ಶಾಕಿಂಗ್ ಘಟನೆ ಕೆಲವು ಸಮಯದ ಹಿಂದೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪೂರ ನಂದಗಡದಲ್ಲಿ ನಡೆದಿತ್ತು. ಹೆಂಡತಿ ಸೀರೆ ಬಿಟ್ಟು ನೈಟಿ ಧರಿಸುತ್ತಿದ್ದಾಳೆ ಎಂದು ಕೋಪಗೊಂಡ ಗಂಡ ಕೃಷ್ಣಾಜಿ ಪಾಟೀಲ್ ತನ್ನ ಪತ್ನಿ ಮಂಜುಳಾ ಪಾಟೀಲ್ ಮೇಲೆ ಬೆಂಕಿ ಹಚ್ಚಿದ್ದ. ಈ ಘಟನೆ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಗಂಡನ ಕೃತ್ಯದಿಂದ ಗಂಭೀರವಾಗಿ ಗಾಯಗೊಂಡ ಮಂಜುಳಾ ಸಾವು ಬದುಕಿನ ನಡುವೆ ಹೋರಾಟ ನಡೆಸಬೇಕಾಯಿತು.
ಒಂದು ನೈಟಿ, ಒಂದು ಲುಕ್ ಅಥವಾ ದೇಹದ ಬದಲಾವಣೆಂತಹ ವಿಷಯಗಳು ಕೊಲೆ ಮಟ್ಟಕ್ಕೆ ಹೋಗುತ್ತಿರುವುದು ಸಮಾಜದ ಮನಸ್ಥಿತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ. ಮಹಿಳೆಯರ ಮೇಲೆ ಮಾನಸಿಕ ಹಾಗೂ ದೈಹಿಕ ಹಿಂಸೆ ಹೆಚ್ಚುತ್ತಿರುವ ಹಿನ್ನೆಲೆ ಇಂತಹ ಘಟನೆಗಳು ಜನರಲ್ಲಿ ಆತಂಕ ಹುಟ್ಟಿಸುತ್ತಿವೆ. ಕುಟುಂಬ ಸಂಬಂಧಗಳು ಪ್ರೀತಿ, ನಂಬಿಕೆ ಮತ್ತು ಗೌರವದ ಮೇಲೆ ನಿಂತಿರಬೇಕು ಎಂಬ ಮಾತು ಮತ್ತೊಮ್ಮೆ ನೆನಪಾಗುವಂತಾಗಿದೆ.
















