ವಿಜಯನಗರ : ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ತೇಗದ ಮರ ಹಾಗೂ ಸೀಸನ್ ಕಟ್ಟಿಗೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಪೇಟೆಯ ಆಜಾದ್ ನಗರದ ನಿವಾಸಿಗಳಾದ ಇಬ್ರಾಹಿಂ ಮತ್ತು ಮುನೀರ್ ಎಂಬುವವರು ಈ ಅಕ್ರಮ ಜಾಲದ ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ.
ಹೊಸಪೇಟೆಯ ಸಾಯಿಬಾಬಾ ಸರ್ಕಲ್ ಸಮೀಪದ ಲೇಔಟ್ ಒಂದರಲ್ಲಿ ಅಕ್ರಮವಾಗಿ ಮರಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ದೊಡ್ಡ ಪ್ರಮಾಣದ ತೇಗ ಹಾಗೂ ಸೀಸನ್ ಮರಮುಟ್ಟುಗಳು ಪತ್ತೆಯಾಗಿವೆ.
ಆರೋಪಿಗಳು ಮುಂಬೈನಿಂದ ಹೊಸಪೇಟೆಗೆ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮರಗಳನ್ನು ತರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ವಶಪಡಿಸಿಕೊಳ್ಳಲಾದ ಕಟ್ಟಿಗೆಗಳ ಮೌಲ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಅಕ್ರಮ ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಕ್ರಮ ಮರ ಸಾಗಾಟದ ವಿರುದ್ಧ ಅರಣ್ಯ ಇಲಾಖೆ ನಡೆಸಿರುವ ಈ ದಿಟ್ಟ ಕ್ರಮವು ಮರಗಳ್ಳರಲ್ಲಿ ನಡುಕ ಹುಟ್ಟಿಸಿದೆ.

















