ಯಾದಗಿರಿ ನಗರದಲ್ಲಿ ನಡೆದಿರುವ ಒಂದು ನಿಗೂಢ ಸಾವು ಸ್ಥಳೀಯ ಜನರನ್ನು ಬೆಚ್ಚಿಬೀಳಿಸಿದೆ. ಆ ಖಾಸಗಿ ಹೋಟೆಲ್‌ನ ಒಂದು ರೂಂ ಎರಡು ದಿನಗಳಿಂದ ಬಾಗಿಲೇ ತೆರೆಯಲಿಲ್ಲ ಒಳಗಿದ್ದ ವ್ಯಕ್ತಿ ಹೊರಗೂ ಬರಲಿಲ್ಲ ಸಿಬ್ಬಂದಿಗೆ ಅನುಮಾನ ಶುರುವಾಯ್ತು. ಕೊನೆಗೆ ರೂಂ ಬಾಗಿಲು ತಟ್ಟಿದರೂ ಒಳಗಿನಿಂದ ಸಣ್ಣ ಪ್ರತಿಕ್ರಿಯೆಯೂ ಇಲ್ಲ. ಕೊನೆಗೆ ಬಾಗಿಲು ತೆರೆಯುತ್ತಿದ್ದಂತೆ ಕಂಡ ದೃಶ್ಯಕ್ಕೆ ಹೋಟೆಲ್ ಸಿಬ್ಬಂದಿ ಬೆಚ್ಚಿಬಿದ್ದರು ಎಂದು ತಿಳಿದುಬಂದಿದೆ.
ಮೃತ ಲಕ್ಷ್ಮಣರಾವ್ (51) ಆಂಧ್ರಪ್ರದೇಶದ ಹೈದರಾಬಾದ್‌ನ ವಿನಾಯಕನಗರ ನಿವಾಸಿ ಎಂದು ಗುರುತಿಸಲಾಗಿರುವ ವ್ಯಕ್ತಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೊದಲಿಗೆ ಇದು ಸಹಜ ಸಾವು ಅನ್ನಿಸಿತಾದರೂ ಆದರೆ ಪೊಲೀಸರ ಪ್ರಾಥಮಿಕ ತನಿಖೆ ಶುರುವಾಗುತ್ತಿದ್ದಂತೆಯೇ ಭಯಾನಕ ಸತ್ಯ ಹೊರಬಿದ್ದಿದೆ. ಮೃತ ಲಕ್ಷ್ಮಣರಾವ್ ಅವರನ್ನು ಅವರ ಅಕ್ಕ ಸಜ್ಜಾ ವರಲಕ್ಷ್ಮಿ ಹಾಗೂ ಭಾವ ಸಜ್ಜಾ ವೆಂಕಟರತ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಪಾತಕರು ಮೂರು ದಿನಗಳ ಹಿಂದೆ ಇದೇ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಒಟ್ಟಾರೆ ಈ ಮೂವರು ನಡುವೆ ಏನೋ ನಡೆದಿದೆ ಎನ್ನಲಾಗಿದೆ. ಅನಂತರ ಅಕ್ಕ-ಭಾವ ಮಾತ್ರ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗುತ್ತಿದೆ.
ಈ ಪ್ರಕರಣ ಕುರಿತು ಪೊಲೀಸ್ ಮೂಲಗಳ ಪ್ರಕಾರ, ಲಕ್ಷ್ಮಣರಾವ್ ಅವರನ್ನು ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿಗಳು ರೂಂ ಬಿಟ್ಟಿದ್ದು ಮತ್ತೆ ವಾಪಸ್ ಆಗಿಲ್ಲ. ಆದರೆ ಇತ್ತ ರೂಮ್‌ನಲ್ಲಿದ್ದ ಮೃತದೇಹ ಎರಡು ದಿನಗಳ ಕಾಲ ಅದೇ ರೂಂನಲ್ಲಿ ಬಿದ್ದಿದೆ. ಹಾಗೂ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲೇ ಇದು ಕೊಲೆ ಎಂಬುದು ಬಹುತೇಕ ಖಚಿತವಾಗಿದೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಇದೀಗ ಆರೋಪಿಗಳಾದ ಅಕ್ಕ ಹಾಗೂ ಭಾವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎನ್ನಲಾಗಿದೆ.

















