ಮನೆ ಸುದ್ದಿ ಜಾಲ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಕರ್ನಾಟಕದಲ್ಲಿ ಬೀರ್, ವಿಸ್ಕಿ ದರ ಇಳಿಕೆ; ಹೊಸ AiB ನೀತಿ...

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಕರ್ನಾಟಕದಲ್ಲಿ ಬೀರ್, ವಿಸ್ಕಿ ದರ ಇಳಿಕೆ; ಹೊಸ AiB ನೀತಿ ಜಾರಿ

0

ಬೆಂಗಳೂರು: ಕರ್ನಾಟಕದ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯ ಅಬಕಾರಿ ಇಲಾಖೆ ಜಾರಿಗೆ ತಂದಿರುವ ಹೊಸ “ಆಲ್ಕೊಹಾಲ್ ಇನ್ ಬೇವರೇಜ್” (AiB) ತೆರಿಗೆ ನೀತಿಯ ಪರಿಣಾಮವಾಗಿ ಬಿಯರ್ ಮತ್ತು ಕೆಲವು ಪ್ರೀಮಿಯಂ ವಿಸ್ಕಿ ಬ್ರ್ಯಾಂಡ್ಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಮೇ 11ರಿಂದ ಹೊಸ ದರಪಟ್ಟಿ ಜಾರಿಗೆ ಬಂದಿದ್ದು, ವಿಶೇಷವಾಗಿ ಮೈಲ್ಡ್ ಮತ್ತು ಲಾಗರ್ ಬಿಯರ್ಗಳ ದರ 20 ರಿಂದ 25 ಶೇಕಡಾ ವರೆಗೆ ಕಡಿಮೆಯಾಗಿದೆ. ಇದರಿಂದ ರಾಜ್ಯದ ಬಿಯರ್ ಪ್ರಿಯರಲ್ಲಿ ಸಂತಸ ಮನೆ ಮಾಡಿದೆ.

ಹೊಸ ದರಪಟ್ಟಿಯ ಪ್ರಕಾರ, 5 ಶೇಕಡಾ ಆಲ್ಕೊಹಾಲ್ v/v ಹೊಂದಿರುವ ಜನಪ್ರಿಯ ಬಿಯರ್ ಬ್ರ್ಯಾಂಡ್ಗಳಾದ ಕಿಂಗ್ಫಿಷರ್ ಪ್ರೀಮಿಯಂ, ಕಿಂಗ್ಫಿಷರ್ ಅಲ್ಟ್ರಾ, ಬಡ್ವೈಸರ್, ಯುಬಿ ಎಕ್ಸ್ಪೋರ್ಟ್ ಮತ್ತು ಹೈನಿಕನ್ ಬಿಯರ್ಗಳ 650 ಮಿ.ಲೀ ಬಾಟಲಿಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಮಾಡಲಾಗಿದೆ. ಕಿಂಗ್ಫಿಷರ್ ಪ್ರೀಮಿಯಂ ಮತ್ತು ಕಿಂಗ್ಫಿಷರ್ ಅಲ್ಟ್ರಾ ಬಿಯರ್ ಬೆಲೆಯಲ್ಲಿ ಸುಮಾರು 75 ರೂಪಾಯಿ ಕಡಿತವಾಗಿದೆ. ಹೈನಿಕನ್ ಬಿಯರ್ ದರದಲ್ಲಿ 70 ರೂಪಾಯಿ ಇಳಿಕೆಯಾಗಿದ್ದು, ಯುಬಿ ಎಕ್ಸ್ಪೋರ್ಟ್ ದರದಲ್ಲಿ 25 ರೂಪಾಯಿ ಹಾಗೂ ಬಡ್ವೈಸರ್ ಪ್ರೀಮಿಯಂ ಬಿಯರ್ ದರದಲ್ಲಿ 20 ರೂಪಾಯಿ ಕಡಿತವಾಗಿದೆ.

ರಾಜ್ಯ ಸರ್ಕಾರದ ಈ ಕ್ರಮದಿಂದ ಬಿಯರ್ ಮಾರಾಟದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮದ್ಯ ಉದ್ಯಮ ವಲಯ ಅಂದಾಜಿಸಿದೆ. ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಬಿಯರ್ ಬೇಡಿಕೆ ಹೆಚ್ಚಿರುವುದರಿಂದ ಹೊಸ ದರಪಟ್ಟಿ ಗ್ರಾಹಕರಿಗೆ ಹೆಚ್ಚಿನ ಲಾಭ ನೀಡಲಿದೆ ಎನ್ನಲಾಗುತ್ತಿದೆ.

ಇದೇ ವೇಳೆ, ಪ್ರೀಮಿಯಂ ಸ್ಕಾಚ್ ವಿಸ್ಕಿ ಪ್ರಿಯರಿಗೂ ಸರ್ಕಾರ ಗುಡ್ ನ್ಯೂಸ್ ನೀಡಿದೆ. 750 ಮಿ.ಲೀ ಬಾಟಲಿಯ ಬ್ಲಾಕ್ ಲೇಬಲ್ ಮತ್ತು ಚಿವಾಸ್ ರೀಗಲ್ ವಿಸ್ಕಿಗಳ ದರವು 5190 ರೂಪಾಯಿಗಳಿಂದ 4100 ರೂಪಾಯಿಗೆ ಇಳಿಕೆಯಾಗಿದೆ. ಸುಮಾರು 20 ಶೇಕಡಾ ಬೆಲೆ ಇಳಿಕೆಯಿಂದ ಪ್ರೀಮಿಯಂ ಮದ್ಯ ಸೇವಿಸುವ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಮತ್ತೊಂದೆಡೆ, ಕಡಿಮೆ ದರದ ದೇಶಿ ತಯಾರಿತ ಮದ್ಯ (IML)ಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಹೊಸ ಅಬಕಾರಿ ನೀತಿಯ ಪರಿಣಾಮ ಮೊದಲ ಐದು ಅಬಕಾರಿ ಸ್ಲ್ಯಾಬ್ಗಳ ಮೇಲೆ ಹೆಚ್ಚಾಗಿ ಬಿದ್ದಿದೆ. ಈ ಮದ್ಯಗಳು ಸಾಮಾನ್ಯವಾಗಿ 180 ಮಿ.ಲೀ ಟೆಟ್ರಾ ಪ್ಯಾಕ್ಗಳಲ್ಲಿ ಮಾರಾಟವಾಗುತ್ತವೆ. ಈ ಸ್ಲ್ಯಾಬ್ಗಳ ದರವನ್ನು 20 ರಿಂದ 25 ಶೇಕಡಾ ವರೆಗೆ ಏರಿಕೆ ಮಾಡಲಾಗಿದೆ.

ಜನಪ್ರಿಯ ರಮ್ ಬ್ರ್ಯಾಂಡ್ ಆಗಿರುವ ಓಲ್ಡ್ ಮಾಂಕ್ ದರದಲ್ಲಿಯೂ ಏರಿಕೆ ಕಂಡುಬಂದಿದೆ. 42.8 ಶೇಕಡಾ ಆಲ್ಕೊಹಾಲ್ v/v ಹೊಂದಿರುವ ಓಲ್ಡ್ ಮಾಂಕ್ ರಮ್ ಹೊಸ ಎಂಆರ್ ಪಿ 765 ರೂಪಾಯಿಗಳಿಂದ 850 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಕಡಿಮೆ ಮತ್ತು ಮಧ್ಯಮ ಆದಾಯದ ಗ್ರಾಹಕರ ಮೇಲೆ ಹೊಸ AiB ನೀತಿಯ ಪರಿಣಾಮ ಹೆಚ್ಚು ಕಾಣಬಹುದು ಎಂದು ಹೇಳಲಾಗುತ್ತಿದೆ.

ಅಬಕಾರಿ ಇಲಾಖೆಯ ಮಾಹಿತಿಯ ಪ್ರಕಾರ, ಮೊದಲ ಐದು ಅಬಕಾರಿ ಸ್ಲ್ಯಾಬ್ಗಳು ರಾಜ್ಯದ ಒಟ್ಟು ಅಬಕಾರಿ ಆದಾಯದ 75 ರಿಂದ 80 ಶೇಕಡಾ ವರೆಗೆ ಕೊಡುಗೆ ನೀಡುತ್ತವೆ. ಹೀಗಾಗಿ ಕಡಿಮೆ ದರದ ಮದ್ಯಗಳ ಮೇಲಿನ ತೆರಿಗೆ ಏರಿಕೆ ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡಲಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರವು ಮೇ 8ರಂದು “ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು, 2026” ಅಧಿಸೂಚನೆಯನ್ನು ಹೊರಡಿಸಿತ್ತು. ಈ ಹೊಸ ನಿಯಮಗಳು ಮೇ 11ರಿಂದ ಜಾರಿಗೆ ಬಂದಿವೆ. ಎಐಬಿ ತೆರಿಗೆ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

AiB ಎಂದರೆ ಮದ್ಯದಲ್ಲಿರುವ ಪ್ರತಿ ಲೀಟರ್ ಆಲ್ಕೊಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ವಿಧಾನವಾಗಿದೆ. ಇದಕ್ಕೂ ಮೊದಲು ಕರ್ನಾಟಕದಲ್ಲಿ “ಬಲ್ಕ್ ಲೀಟರ್ ಆಲ್ಕೊಹಾಲ್” ಆಧಾರಿತ ತೆರಿಗೆ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ಅದನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಜೊತೆಗೆ, ರಾಜ್ಯದಲ್ಲಿ ಎಂಆರ್ ಪಿ ಆಧಾರಿತ ಅಬಕಾರಿ ಸ್ಲ್ಯಾಬ್ಗಳ ಸಂಖ್ಯೆಯನ್ನು 16ರಿಂದ 8ಕ್ಕೆ ಇಳಿಕೆ ಮಾಡಲಾಗಿದೆ.