ಬೆಂಗಳೂರು : ವೃದ್ಧ ತಾಯಿಯನ್ನು ನೋಡಿಕೊಳ್ಳದೆ ಆಸ್ತಿ ಮಾತ್ರ ಬೇಕೆಂದು ವರ್ತಿಸಿದ ಮಗಳಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಾಯಿಯ ಆರೈಕೆ ಮಾಡದ ಹಿನ್ನೆಲೆಯಲ್ಲಿ ಮಗಳಿಗೆ ಉಡುಗೊರೆಯಾಗಿ ನೀಡಿದ್ದ ಆಸ್ತಿಯ ದಾನಪತ್ರವನ್ನು ರದ್ದುಪಡಿಸಿ, ಆಸ್ತಿಯನ್ನು ಮತ್ತೆ ತಾಯಿಯ ಹೆಸರಿಗೆ ವರ್ಗಾಯಿಸಲು ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹಿರಿಯ ನಾಗರಿಕರ ಹಕ್ಕುಗಳು, ಮಕ್ಕಳ ಜವಾಬ್ದಾರಿ ಮತ್ತು ಪೋಷಕರ ಕಲ್ಯಾಣ ಕುರಿತಂತೆ ಈ ತೀರ್ಪು ಮಹತ್ವ ಪಡೆದಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ-2007 ಅಡಿಯಲ್ಲಿ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಗಳು ಪವಿತ್ರಾ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ, ತಾಯಿಯನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ಮಕ್ಕಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ ಪ್ರಕಾರ, ಸುಮಾರು 62 ವರ್ಷದ ನಿವೃತ್ತ ಶಿಕ್ಷಕಿ ಜಿ. ಹೇಮಾ ಅವರು ತಮ್ಮ ಸ್ವಂತ ದುಡಿಮೆ ಮೂಲಕ ಸಂಪಾದಿಸಿದ್ದ ಆಸ್ತಿಯನ್ನು ಮಗಳು ಆರ್. ಪವಿತ್ರಾ ಮತ್ತು ಮಗ ಆರ್. ವೇಣುಗೋಪಾಲ್ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳು ಆಸರೆಯಾಗುತ್ತಾರೆ ಮತ್ತು ಆಸ್ತಿಯ ಬಾಡಿಗೆಯಿಂದ ಜೀವನ ಸಾಗಿಸಲು ಸಹಾಯವಾಗುತ್ತದೆ ಎಂಬ ನಂಬಿಕೆಯಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು.
ಆದರೆ ಆಸ್ತಿ ವರ್ಗಾವಣೆ ಆದ ಬಳಿಕ ಮಕ್ಕಳಿಬ್ಬರು ಮನೆಯ ಬಾಡಿಗೆ ವಸೂಲಿ ಮಾಡುವತ್ತ ಗಮನ ಹರಿಸಿದ್ದು, ತಾಯಿಯ ಆರೈಕೆ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತಾಯಿಗೆ ಮಾನಸಿಕ ಹಿಂಸೆ ನೀಡಲಾಗಿತ್ತು ಎಂಬ ಸಂಗತಿಯೂ ಪ್ರಕರಣದಲ್ಲಿ ಉಲ್ಲೇಖವಾಗಿದೆ. ಇದರಿಂದ ಬೇಸತ್ತ ಹೇಮಾ ಅವರು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯಡಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿ, ಮಕ್ಕಳಿಗೆ ನೀಡಿದ್ದ ದಾನಪತ್ರ ರದ್ದುಪಡಿಸುವಂತೆ ಮನವಿ ಮಾಡಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿ, ಆಸ್ತಿ ವರ್ಗಾವಣೆ ರದ್ದುಪಡಿಸಿ, ಆಸ್ತಿಯನ್ನು ಮತ್ತೆ ತಾಯಿ ಹೇಮಾ ಅವರ ಹೆಸರಿಗೆ ನೋಂದಣಿ ಮಾಡಲು ಆದೇಶಿಸಿತ್ತು. ನಂತರ ಮಗಳು ಪವಿತ್ರಾ ಉಪವಿಭಾಗಾಧಿಕಾರಿಗಳ ಮುಂದೆ ಮೇಲ್ಮನವಿ ಸಲ್ಲಿಸಿದ್ದರೂ, ಉಪವಿಭಾಗಾಧಿಕಾರಿಗಳು ಕೂಡ ನ್ಯಾಯಮಂಡಳಿ ಆದೇಶವನ್ನು ಸಮರ್ಥಿಸಿದ್ದರು.
ಇದನ್ನು ಪ್ರಶ್ನಿಸಿ ಮಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ದಾನಪತ್ರದಲ್ಲಿ ತಾಯಿಯನ್ನು ನೋಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಆಸ್ತಿ ನೀಡುವ ಹಿಂದೆ ಮಕ್ಕಳ ಮೇಲೆ ನಂಬಿಕೆ ಮತ್ತು ಭದ್ರತೆಯ ನಿರೀಕ್ಷೆ ಇರುವುದು ಸಹಜ ಎಂದು ಹೇಳಿದೆ.
ಮಗಳು ಸ್ವಂತ ಮನೆ ಹೊಂದಿದ್ದರೂ ವೃದ್ಧ ತಾಯಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿರುವುದು ಮಕ್ಕಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಮುಖ್ಯ ಉದ್ದೇಶ ಅಸಹಾಯಕ ಪೋಷಕರನ್ನು ರಕ್ಷಿಸುವುದಾಗಿದೆ. ಕೇವಲ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಈ ಕಾಯ್ದೆಯ ಆಶಯವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹೀಗಾಗಿ ಉಪವಿಭಾಗಾಧಿಕಾರಿಗಳ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ದಾನಪತ್ರ ರದ್ದುಪಡಿಸಿ ಆಸ್ತಿಯನ್ನು ಮತ್ತೆ ತಾಯಿಯ ಸ್ವಾಧೀನಕ್ಕೆ ನೀಡಿರುವ ಕ್ರಮ ಕಾನೂನುಬದ್ಧ ಮತ್ತು ಸಮರ್ಥನೀಯವಾಗಿದೆ ಎಂದು ತೀರ್ಪು ನೀಡಿದೆ.
















