ಮನೆ ಸುದ್ದಿ ಜಾಲ Kabaddi Clue: 1395 ದಿನಗಳ ಬಳಿಕ ಪೋಷಕರಿಗೆ ಮರಳಿದ ನಾಪತ್ತೆ ಬಾಲಕ; ಮಂಡ್ಯ ಪ್ರಕರಣಕ್ಕೆ ಸಿಕ್ಕ...

Kabaddi Clue: 1395 ದಿನಗಳ ಬಳಿಕ ಪೋಷಕರಿಗೆ ಮರಳಿದ ನಾಪತ್ತೆ ಬಾಲಕ; ಮಂಡ್ಯ ಪ್ರಕರಣಕ್ಕೆ ಸಿಕ್ಕ ಸಿನಿಮಾ ಟ್ವಿಸ್ಟ್!

0

ಮಂಡ್ಯ :  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೇಮರಳ್ಳಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ನಾಪತ್ತೆ ಪ್ರಕರಣ ಈಗ ಸುಖಾಂತ್ಯ ಕಂಡಿದೆ. 1395 ದಿನಗಳಿಂದ ಕುಟುಂಬದವರ ಕಣ್ಣೀರಿಗೂ, ಪೊಲೀಸರ ನಿರಂತರ ಹುಡುಕಾಟಕ್ಕೂ ಕೊನೆಗೂ ಫಲ ಸಿಕ್ಕಿದ್ದು, ಕಾಣೆಯಾಗಿದ್ದ ಕಿಶೋರ್ ಎಂಬ ಬಾಲಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಕಬಡ್ಡಿ ಆಟದ ಮೂಲಕ ಈ ಪ್ರಕರಣ ಭೇದವಾಗಿರುವುದು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ.

ಈರೇಗೌಡರ ಪುತ್ರ ಕಿಶೋರ್ ಅನ್ನು 2022ರ ಆಗಸ್ಟ್ 8ರಂದು ಮಂಡ್ಯ ತಾಲೂಕಿನ ತಂಗಳಗೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಾಖಲಿಸಲಾಗಿತ್ತು. ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಆಶಯದಿಂದ ಪೋಷಕರು ಮಗನನ್ನು ವಸತಿ ಶಾಲೆಗೆ ಕಳುಹಿಸಿದ್ದರು. ಆದರೆ ಶಾಲಾ ಜೀವನಕ್ಕೆ ಹೊಂದಿಕೊಳ್ಳಲಾಗದೆ ಕಿಶೋರ್ ಕೆಲವೇ ದಿನಗಳಲ್ಲಿ ಅಲ್ಲಿಂದ ಹೊರಟಿದ್ದಾನೆ ಎನ್ನಲಾಗಿದೆ.

ಸುಮಾರು 20 ದಿನಗಳ ಬಳಿಕ ಮಗನನ್ನು ನೋಡಲು ಶಾಲೆಗೆ ಬಂದ ತಂದೆ ಈರೇಗೌಡರಿಗೆ ದೊಡ್ಡ ಆಘಾತ ಕಾದಿತ್ತು. “ಕಿಶೋರ್ ಹಲವು ದಿನಗಳಿಂದ ಶಾಲೆಗೆ ಬಂದಿಲ್ಲ” ಎಂದು ಶಿಕ್ಷಕರು ಮಾಹಿತಿ ನೀಡಿದ್ದರು. ಇದರಿಂದ ಬೆಚ್ಚಿಬಿದ್ದ ಕುಟುಂಬದವರು ತಕ್ಷಣ ಶಾಲಾ ಆಡಳಿತವನ್ನು ಪ್ರಶ್ನಿಸಿದ್ದರು. ಬಳಿಕ ಶಾಲೆಯ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, 2022ರ ಆಗಸ್ಟ್ 10ರಂದು ಕಿಶೋರ್ ಶಾಲೆಯ ಒಳಗೆ ಹೋಗುತ್ತಿರುವ ದೃಶ್ಯ ಮಾತ್ರ ಸಿಕ್ಕಿತ್ತು. ಆದರೆ ಶಾಲೆಯಿಂದ ಹೊರ ಹೋಗಿರುವ ಯಾವುದೇ ವಿಡಿಯೋ ಪತ್ತೆಯಾಗಿರಲಿಲ್ಲ.

ಈ ಬೆಳವಣಿಗೆ ಪೋಷಕರ ಆತಂಕವನ್ನು ಇನ್ನಷ್ಟು ಹೆಚ್ಚಿಸಿತು. ಮಗನಿಗೆ ಏನಾದರೂ ಅನಾಹುತವಾಗಿರಬಹುದು ಎಂಬ ಶಂಕೆಯಿಂದ ಕುಟುಂಬದವರು ಹಾಗೂ ಗ್ರಾಮಸ್ಥರು ಶಾಲೆ ಎದುರು ಪ್ರತಿಭಟನೆ ನಡೆಸಿದ್ದರು. ಬಳಿಕ ಕೆರಗೋಡು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. “ನಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ” ಎಂದು ಪೋಷಕರು ಕಣ್ಣೀರಿಟ್ಟಿದ್ದರು.

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ನಂತರ ಮಂಡ್ಯ ಎಸ್ ಪಿ ಶೋಭಾರಾಣಿ ವಿಶೇಷ ಗಮನ ಹರಿಸಿದ್ದರು. ನಾಪತ್ತೆ ಪ್ರಕರಣಗಳ ಪತ್ತೆಗೆ ರಚಿಸಲಾದ ವಿಶೇಷ ತಂಡಕ್ಕೆ ಕಿಶೋರ್ ಹುಡುಕಾಟದ ಜವಾಬ್ದಾರಿ ನೀಡಲಾಗಿತ್ತು. ಹಲವು ತಿಂಗಳುಗಳ ಕಾಲ ಪೊಲೀಸರು ತಾಂತ್ರಿಕ ಮಾಹಿತಿ, ಮೊಬೈಲ್ ಸುಳಿವು ಹಾಗೂ ವಿವಿಧ ಮೂಲಗಳಿಂದ ತನಿಖೆ ಮುಂದುವರೆಸಿದ್ದರು.

ಆದರೆ ಈ ಪ್ರಕರಣಕ್ಕೆ ಅಚ್ಚರಿಯ ತಿರುವು ನೀಡಿದ್ದು ಕಬಡ್ಡಿ ಆಟ. ಕಬಡ್ಡಿ ಮೇಲೆ ಆಸಕ್ತಿ ಹೊಂದಿದ್ದ ಕಿಶೋರ್ ಬೆಂಗಳೂರಿನಲ್ಲಿ ಸ್ಥಳೀಯ ಯುವಕರ ಜೊತೆ ಟೂರ್ನಮೆಂಟ್ ಆಡುತ್ತಿದ್ದ ವೇಳೆ ಪೊಲೀಸ್ ತಂಡದ ಗಮನಕ್ಕೆ ಬಂದಿದ್ದಾನೆ. ಅನುಮಾನಗೊಂಡ ಪೊಲೀಸರು ಅವನನ್ನು ಗುಪ್ತವಾಗಿ ಹಿಂಬಾಲಿಸಿ ಕೊನೆಗೆ ಬೆಂಗಳೂರಿನ ಒಂದು ಎಗ್ ರೈಸ್ ಅಂಗಡಿಯಲ್ಲಿ ಪತ್ತೆ ಹಚ್ಚಿದ್ದಾರೆ.

ಪೊಲೀಸರ ವಿಚಾರಣೆಯ ವೇಳೆ ಕಿಶೋರ್ ನೀಡಿದ ಮಾಹಿತಿ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿತು. ಅವನನ್ನು ಯಾರೂ ಅಪಹರಿಸಿರಲಿಲ್ಲ, ಯಾವುದೇ ಕೊಲೆ ಯತ್ನವೂ ನಡೆದಿರಲಿಲ್ಲ. ಓದಿನ ಮೇಲೆ ಆಸಕ್ತಿ ಇಲ್ಲದ ಕಾರಣ ಕಿಶೋರ್ ತಾನೇ ಶಾಲೆಯ ಕಾಂಪೌಂಡ್ ಹಾರಿ ಬೆಂಗಳೂರಿಗೆ ಹೋಗಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರು ಸೇರಿದ್ದ ಕಿಶೋರ್, “ನಾನು ಅನಾಥ” ಎಂದು ಹೇಳಿ ಹಾಸನ ಮೂಲದ ಜಯತೀರ್ಥ ಎಂಬವರ ಬಳಿ ಆಶ್ರಯ ಪಡೆದಿದ್ದ. ನಂತರ ಹಲವು ಹೋಟೆಲ್ ಗಳಲ್ಲಿ ಕೆಲಸ ಮಾಡಿಕೊಂಡು ನಾಲ್ಕು ವರ್ಷ ಜೀವನ ಸಾಗಿಸಿದ್ದಾನೆ. ಕೊನೆಗೆ ತಾಂತ್ರಿಕ ಮಾಹಿತಿ ಹಾಗೂ ಪೊಲೀಸರ ಚಾಕಚಕ್ಯತೆಯಿಂದ ಕಿಶೋರ್ ಪತ್ತೆಯಾಗಿದ್ದು, ಈಗ ಅವನನ್ನು ಕುಟುಂಬದವರ ಬಳಿ ಕರೆತರಲಾಗಿದೆ.

ನಾಲ್ಕು ವರ್ಷಗಳಿಂದ ಮಗನಿಗಾಗಿ ಕಣ್ಣೀರಿಟ್ಟಿದ್ದ ಪೋಷಕರ ಮುಖದಲ್ಲಿ ಇದೀಗ ಸಂತಸ ಮರಳಿದೆ. ಮಂಡ್ಯ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಿಯಾಕತ್ ಉಲ್ಲಾ ಪ್ರಕರಣದ ಸಂಪೂರ್ಣ ವಿವರವನ್ನು ಬಹಿರಂಗಪಡಿಸಿದ್ದು, ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.