ಮನೆ ಸುದ್ದಿ ಜಾಲ Namma Metro Purple Line: ಭಾನುವಾರ ನೇರಳೆ ಮಾರ್ಗದಲ್ಲಿ ಎರಡು ಗಂಟೆ ಮೆಟ್ರೋ ಸೇವೆ ಸ್ಥಗಿತ,...

Namma Metro Purple Line: ಭಾನುವಾರ ನೇರಳೆ ಮಾರ್ಗದಲ್ಲಿ ಎರಡು ಗಂಟೆ ಮೆಟ್ರೋ ಸೇವೆ ಸ್ಥಗಿತ, ಪ್ರಯಾಣಿಕರಿಗೆ BMRCL ಎಚ್ಚರಿಕೆ

0

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ  ಸೇವೆ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದ್ದು, ವಿವಿಧ ಮಾರ್ಗಗಳಲ್ಲಿ ನಿರ್ವಹಣಾ ಮತ್ತು ತಾಂತ್ರಿಕ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಭಾನುವಾರ (ಮೇ 17) ನೇರಳೆ ಮಾರ್ಗದಲ್ಲಿ (Purple Line) ಕೆಲವು ಸಮಯ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ. ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ಗಂಟೆಗಳ ಕಾಲ ಕೆಲವು ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್) ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ (ಸೆಂಟ್ರಲ್ ಕಾಲೇಜು) ನಡುವಿನ ಭಾಗದಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯ ಪರಿಣಾಮವಾಗಿ ನೇರಳೆ ಮಾರ್ಗದ ಕೆಲ ವಿಭಾಗಗಳಲ್ಲಿ ರೈಲು ಓಡಾಟ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ – ಹೊಸಹಳ್ಳಿ ಹಾಗೂ ಕಬ್ಬನ್ ಪಾರ್ಕ್ ಭಾಗದ ನಾಲ್ಕು ಮೆಟ್ರೋ ನಿಲ್ದಾಣಗಳ ಮಧ್ಯೆ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮೆಟ್ರೋ ಸೇವೆ ಇರುವುದಿಲ್ಲ. ಹೀಗಾಗಿ ಭಾನುವಾರ ಬೆಳಗ್ಗೆ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಮಾಡುವಂತೆ ಮೆಟ್ರೋ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಆದರೆ ನೇರಳೆ ಮಾರ್ಗದ ಸಂಪೂರ್ಣ ಸೇವೆ ಬಂದ್ ಆಗುವುದಿಲ್ಲ. ಚಲ್ಲಘಟ್ಟದಿಂದ ವಿಜಯನಗರದವರೆಗೆ ರೈಲುಗಳು ಎಂದಿನಂತೆ ಓಡಾಟ ನಡೆಸಲಿವೆ. ಅದೇ ರೀತಿ ಎಂ.ಜಿ. ರಸ್ತೆದಿಂದ ವೈಟ್ಫೀಲ್ಡ್ (ಕಾಡುಗೋಡಿ) ವರೆಗೆ ಮೆಟ್ರೋ ಸೇವೆ ಲಭ್ಯ ಇರಲಿದೆ. ಹೀಗಾಗಿ ನಗರದ ಕೆಲವು ಭಾಗಗಳಲ್ಲಿ ಮಾತ್ರ ಸಂಚಾರ ಅಡಚಣೆ ಉಂಟಾಗಲಿದ್ದು, ಉಳಿದ ಪ್ರದೇಶಗಳಲ್ಲಿ ಪ್ರಯಾಣ ಸುಗಮವಾಗಿರಲಿದೆ.

ಇದಲ್ಲದೆ ಹಳದಿ ಮಾರ್ಗದಲ್ಲಿ ಆರ್.ವಿ. ರಸ್ತೆದಿಂದ ಬೊಮ್ಮಸಂದ್ರವರೆಗೆ ಮೆಟ್ರೋ ಸೇವೆ ಮುಂದುವರಿಯಲಿದೆ. ಹಸಿರು ಮಾರ್ಗದಲ್ಲಿಯೂ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಭಾನುವಾರದ ನಿಯಮಿತ ವೇಳಾಪಟ್ಟಿಯಂತೆ ಬೆಳಗ್ಗೆ 7 ಗಂಟೆಯಿಂದಲೇ ರೈಲು ಸೇವೆಗಳು ಆರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ನಂತರ ಬೆಳಗ್ಗೆ 9 ಗಂಟೆಯಿಂದ ಮತ್ತೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಸಾಮಾನ್ಯ ಸ್ಥಿತಿಗೆ ಮರಳಲಿದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ – ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಡುವಿನ ಸಂಚಾರವೂ ಪುನರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ಕಾಮಗಾರಿಯನ್ನು ಕಳೆದ ವಾರ ಮೇ 10ರಂದು ಕೈಗೊಳ್ಳಲು ಬಿಎಂಆರ್‌ಸಿಎಲ್ ಯೋಜಿಸಿತ್ತು. ಆ ದಿನವೂ ನೇರಳೆ ಮಾರ್ಗದ ಕೆಲವು ಭಾಗಗಳಲ್ಲಿ ಸೇವೆ ಸ್ಥಗಿತಗೊಳಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಿದ್ದ ಹಿನ್ನೆಲೆ ಮತ್ತು ನಗರದಲ್ಲಿ ಹೆಚ್ಚಿನ ಜನ ಸಂಚಾರ ಇರುವ ಕಾರಣ ಸೇವೆ ಕಡಿತದ ನಿರ್ಧಾರವನ್ನು ಹಿಂಪಡೆಯಲಾಗಿತ್ತು.

ಅಂದು ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗೆ 7 ಗಂಟೆಗೆ ಬದಲು 5 ಗಂಟೆಯಿಂದಲೇ ನಾಲ್ಕು ಟರ್ಮಿನಲ್ ನಿಲ್ದಾಣಗಳಿಂದ ಮೆಟ್ರೋ ಸೇವೆ ಆರಂಭಿಸಲಾಗಿತ್ತು. ಇದೀಗ ಮುಂದೂಡಲಾಗಿದ್ದ ಕಾಮಗಾರಿಯನ್ನು ಈ ಭಾನುವಾರ ಕೈಗೊಳ್ಳಲಾಗುತ್ತಿದ್ದು, ಪ್ರಯಾಣಿಕರು ಸಮಯದ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.