ಬೆಂಗಳೂರು : ಸರ್ಕಾರ ಮತ್ತು ಸಾರಿಗೆ ನೌಕರರ ವೇತನ ಹೆಚ್ಚಳ ವಿಚಾರದ ಫೈಟ್ ಮುಂದುವರೆದಿದ್ದು, ಮೇ 20 ರಂದು ಅನಿರ್ಧಿಷ್ಟಾವಧಿ ಮುಷ್ಕರದ ತಯಾರಿ ಜೊತೆಗೆ ಸರ್ಕಾರದ ಸಾಧನಾ ಸಮಾವೇಶಕ್ಕೂ ಹೋರಾಟದ ಬಿಸಿ ಮುಟ್ಟಿಸಲು ನೌಕರರು ಮುಂದಾಗಿದ್ದಾರೆ. ಸಾರಿಗೆ ನೌಕರರ ಸಂಬಳ ಹೆಚ್ಚಳ ವಿಚಾರವಾಗಿ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಸಮಸ್ಯೆಗೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣ ಕಾಣ್ತಿಲ್ಲ. ಪಟ್ಟು ಬಿಡದ ನೌಕರರ ಮನವೊಲಿಸೋಕೆ ಸರ್ಕಾರ 12.5% ಸಂಬಳ ಹೆಚ್ಚಳಕ್ಕೆ ತೀರ್ಮಾನಿಸಿ ಆದೇಶ ಮಾಡಿದೆ.
ಆದರೆ, ಪಟ್ಟು ಬಿಡದ ನೌಕರರು ಸರ್ಕಾರದ ಹೊಸ ಆದೇಶವನ್ನು ಒಪ್ಪದೇ ಮುಷ್ಕರ ಮಾಡೋದಾಗಿ ಪಟ್ಟು ಹಿಡಿದಿದ್ದಾರೆ. ಇದರ ಜೊತೆ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ನೌಕರರು ಸಾಧನಾ ಸಮಾವೇಶದಲ್ಲೂ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.
2024ರ ಜನವರಿಯಿಂದ 25% ಸಂಬಳ ಹೆಚ್ಚಳಕ್ಕೆ ಸಾರಿಗೆ ನೌಕರರು ಪಟ್ಟು ಹಿಡಿದಿದ್ದರು. ಕಳೆದ 20 ದಿನದ ಹಿಂದೆ ಸರ್ಕಾರ 7% ಏರಿಕೆ ಮಾಡೋದಾಗಿ ತಿಳಿಸಿತ್ತು. ಇದಕ್ಕೆ ನೌಕರರು ಒಪ್ಪದೇ ಇದ್ದಾಗ, ನೇರವಾಗಿ ಸಾರಿಗೆ ಸಚಿವರೇ ಮತ್ತೊಂದು ಸಭೆ ಮಾಡಿ, ನೌಕರರ ಸಂಘಟನೆಗಳ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ, ಆಗಲೂ ಕೂಡ ಸಾರಿಗೆ ಮುಖಂಡರು ಒಪ್ಪದೇ ಸಭೆ ವಿಫಲವಾಗಿತ್ತು.
ಬಳಿಕ ಸಾರಿಗೆ ನೌಕರರ ಬೇಡಿಕೆ ನಿರ್ಧಾರ ಸಿಎಂ ಅಂಗಳಕ್ಕೆ ತಲುಪಿತ್ತು. ಈ ಬಗ್ಗೆ ಸಾರಿಗೆ ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಿದ್ದ ಸಿಎಂ, ಕೊನೆಗೆ 2025ರ ಮಾರ್ಚ್‌ನಿಂದ ಅನ್ವಯವಾಗುವಂತೆ 12.5% ಏರಿಕೆಗೆ ಒಪ್ಪಿ ಆದೇಶ ಹೊರಡಿಸಿ ನೌಕರರನ್ನ ಸಮಾಧಾನಪಡಿಸಲು ಮುಂದಾದರು.
ಇದಕ್ಕೂ ಬಗ್ಗದ ನೌಕರರು ತಮ್ಮ ಬೇಡಿಕೆ ಈಡೇರಿಸಲೇಬೇಕು, ಇಲ್ಲದಿದ್ದರೆ ಮುಷ್ಕರ ಎದುರಿಸಿ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮುಷ್ಕರಕ್ಕೆ ಮುಂಚಿತವಾಗಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲೂ ಚಿಂತನೆ ಮಾಡಿರುವ ಸಂಘಟನೆಗಳು, ಇದೇ 19 ರಂದು ತುಮಕೂರಿನಲ್ಲಿ ನಡೆಯಲಿರುವ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶದಲ್ಲೂ ಪ್ರತಿಭಟನೆ ಬಿಸಿ ಮುಟ್ಟಿಸೋಕೆ ಮುಂದಾಗಿವೆ.
ತುಮಕೂರಿನ ಟೌನ್‌ಹಾಲ್ ಬಳಿ ಕಪ್ಪು ಬಟ್ಟೆ ಪ್ರದರ್ಶನಕ್ಕೆ ತಯಾರಿ ಮಾಡಿಕೊಂಡಿದ್ದು, ನೂರಾರು ಚಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಜೊತೆಗೆ 20 ರಿಂದ ಆರಂಭವಾಗಲಿರುವ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆ, ಮೇ 19 ರ ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸುವ ನಿರ್ಧಾರಕ್ಕೆ ನೌಕರರು ಮುಂದಾಗಿದ್ದಾರೆ. ಸರ್ಕಾರ ಮುಷ್ಕರದಲ್ಲಿ ಭಾಗಿಯಾಗದಂತೆ ನೌಕರರಿಗೆ ಎಸ್ಮಾ ಜಾರಿ ಮಾಡುವ ಸಾಧ್ಯತೆ ಕೂಡ ಇದೆ. ಈಗಾಗಲೇ ಎಸ್ಮಾ ಜಾರಿಗೆ ನಾವು ಬಗ್ಗಲ್ಲ ಅಂದಿರೋ ನೌಕರರು, ಪ್ರತಿಭಟನೆ ಮಾಡೇ ಮಾಡ್ತೀವಿ ಎಂದು ಪಟ್ಟು ಹಿಡಿದಿದ್ದಾರೆ.

















