ಮನೆ ಸುದ್ದಿ ಜಾಲ ಕಿಟಕಿಯ ಗ್ರಿಲ್ ಮುರಿದು ಪರಾರಿಯಾದ ಉಗಾಂಡ ಮಹಿಳೆಯರು; ಮತ್ತೆ ಡ್ರಗ್ಸ್ ಜಾಲ ಸೇರೋ ಭೀತಿ!

ಕಿಟಕಿಯ ಗ್ರಿಲ್ ಮುರಿದು ಪರಾರಿಯಾದ ಉಗಾಂಡ ಮಹಿಳೆಯರು; ಮತ್ತೆ ಡ್ರಗ್ಸ್ ಜಾಲ ಸೇರೋ ಭೀತಿ!

0

ಬೆಂಗಳೂರು: ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ತಂಗಿರುವ ವಿದೇಶಿಗರ ಚಟುವಟಿಕೆಗಳು ಮತ್ತೆ ಬೆಂಗಳೂರಿನಲ್ಲಿ ಆತಂಕಕ್ಕೆ ಕಾರಣವಾಗಿವೆ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಗುಬ್ಬಿಯಲ್ಲಿರುವ ‘ಹೋಮ್ ಆಫ್ ಹೋಪ್’ ನಿರಾಶ್ರಿತರ ಕೇಂದ್ರದಿಂದ ಉಗಾಂಡ ಮೂಲದ ನಾಲ್ವರು ಮಹಿಳೆಯರು ಕಿಟಕಿಯ ಕಬ್ಬಿಣದ ಗ್ರಿಲ್ ಮುರಿದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಮಹಿಳೆಯರು ಹಿಂದಿನಿಂದಲೂ ಡ್ರಗ್ಸ್ ಮತ್ತು ಗಾಂಜಾ ಸಾಗಣೆ ಜಾಲದ ಸಂಪರ್ಕ ಹೊಂದಿದ್ದ ಹಿನ್ನೆಲೆ, ಮತ್ತೆ ಮಾದಕ ವಸ್ತುಗಳ ದಂಧೆಗೆ ಇಳಿಯುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಚಿಕ್ಕಗುಬ್ಬಿಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ನೈಜೀರಿಯಾ, ಉಗಾಂಡ, ಕೀನ್ಯಾ ಸೇರಿದಂತೆ ಹಲವು ದೇಶಗಳ ಅಕ್ರಮ ವಲಸಿಗರನ್ನು ತಾತ್ಕಾಲಿಕವಾಗಿ ಇರಿಸಲಾಗಿತ್ತು. ವಿದೇಶಿ ಪ್ರಜೆಗಳ ದಾಖಲೆ ಪರಿಶೀಲನೆ ಹಾಗೂ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇವರನ್ನು ಅಲ್ಲೇ ಇರಿಸಲಾಗುತ್ತಿತ್ತು. ಇದೇ ಕೇಂದ್ರದಲ್ಲಿದ್ದ ಉಗಾಂಡ ಮೂಲದ ತೋಪಿಷ್ಟ, ನಗವ, ಸಫಿನಾ ಮತ್ತು ಪಿತೀನಾ ಎಂಬ ನಾಲ್ವರು ಮಹಿಳೆಯರು ಮೇ 11ರಂದು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಪರಾರಿಯಾಗಿದ್ದಾರೆ.

ಎರಡನೇ ಮಹಡಿಯಲ್ಲಿದ್ದ ಕೊಠಡಿಯ ಕಿಟಕಿಯ ಕಬ್ಬಿಣದ ಸರಳು ಮುರಿದು, ಭದ್ರತಾ ಸಿಬ್ಬಂದಿಯ ಗಮನ ತಪ್ಪಿಸಿ ಮಹಿಳೆಯರು ಹೊರಬಂದಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸಮಯದಲ್ಲಿ ಹೆಚ್ಚಿನವರು ನಿದ್ರೆಯಲ್ಲಿದ್ದ ಕಾರಣ, ಕೆಲ ಹೊತ್ತಿನವರೆಗೂ ಯಾರಿಗೂ ಈ ವಿಚಾರ ತಿಳಿದಿರಲಿಲ್ಲ. ಬಳಿಕ ಪರಿಶೀಲನೆ ನಡೆಸಿದಾಗ ನಾಲ್ವರು ಮಹಿಳೆಯರು ಕಾಣೆಯಾಗಿರುವುದು ಗೊತ್ತಾಗಿ, ತಕ್ಷಣ ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪರಾರಿಯಾದ ಮಹಿಳೆಯರು ಈಗಾಗಲೇ ಡ್ರಗ್ಸ್ ಹಾಗೂ ಗಾಂಜಾ ಮಾರಾಟ ಮತ್ತು ಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ನಿರಾಶ್ರಿತರ ಕೇಂದ್ರದಲ್ಲಿದ್ದ ಸಂದರ್ಭದಲ್ಲಿಯೂ ಇವರ ಬಳಿ ಮಾದಕ ವಸ್ತುಗಳು ಪತ್ತೆಯಾಗಿದ್ದವು ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ, ಪರಾರಿಯಾದ ನಂತರ ಮತ್ತೆ ಹಳೆಯ ಡ್ರಗ್ಸ್ ನೆಟ್ವರ್ಕ್ ಸಂಪರ್ಕಿಸಿ ಅಕ್ರಮ ಚಟುವಟಿಕೆ ಆರಂಭಿಸುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ವೀಸಾ ಅವಧಿ ಮುಗಿದರೂ ಭಾರತದಲ್ಲೇ ಉಳಿದುಕೊಂಡಿರುವ ಹಲವು ವಿದೇಶಿಗರು ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ಈಗಾಗಲೇ ಪೊಲೀಸ್ ಇಲಾಖೆಗೆ ಇತ್ತು. ಇದೇ ಕಾರಣಕ್ಕೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದೇಶಿಗರ ಮೂಲಕ ಡ್ರಗ್ಸ್ ಸರಬರಾಜು ಪ್ರಕರಣಗಳು ಹೆಚ್ಚಾಗಿರುವುದರಿಂದ, ಈ ನಾಲ್ವರು ಮಹಿಳೆಯರ ಪತ್ತೆ ಪೊಲೀಸರಿಗೆ ಸವಾಲಾಗಿದೆ.

ಇನ್ನು FRRO ಅಧಿಕಾರಿಗಳಿಗೆ ಸಹ ಈ ಪ್ರಕರಣ ದೊಡ್ಡ ತಲೆನೋವಾಗಿದೆ. ಅಕ್ರಮ ವಲಸಿಗರನ್ನು ಇರಿಸಲು ಬೇಕಾದ ವಿಶೇಷ ಕೇಂದ್ರಗಳಲ್ಲಿ ಸ್ಥಳಾವಕಾಶ ಕೊರತೆ ಇರುವ ಕಾರಣ, ಕೆಲವರನ್ನು ಖಾಸಗಿ ಆಶ್ರಮ ಹಾಗೂ ನಿರಾಶ್ರಿತರ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ. ಆದರೆ ಅಲ್ಲಿ ಭದ್ರತಾ ವ್ಯವಸ್ಥೆ ದುರ್ಬಲವಾಗಿರುವ ಆರೋಪಗಳು ಕೇಳಿಬರುತ್ತಿವೆ.

ನಿರಾಶ್ರಿತರ ಕೇಂದ್ರದ ಸಿಬ್ಬಂದಿಯೊಂದಿಗೆ ಈ ಮಹಿಳೆಯರು ಆಗಾಗ ಗಲಾಟೆ ನಡೆಸುತ್ತಿದ್ದರು ಎನ್ನಲಾಗಿದೆ. ಮಾದಕ ವಸ್ತುಗಳ ವ್ಯಸನದಿಂದಾಗಿ ಸಿಬ್ಬಂದಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದೇ ಹಿನ್ನೆಲೆ ಪರಾರಿ ಸಂಚು ರೂಪಿಸಿ, ಸೂಕ್ತ ಸಮಯ ನೋಡಿಕೊಂಡು ಕೇಂದ್ರದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಈ ಪ್ರಕರಣ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಾರಿಯಾದ ನಾಲ್ವರು ಮಹಿಳೆಯರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದು, ಡ್ರಗ್ಸ್ ಜಾಲದ ಸಂಪರ್ಕ ಹೊಂದಿರುವವರ ಮೇಲೂ ನಿಗಾ ಇರಿಸಲಾಗಿದೆ.