ಮನೆ ಅಪರಾಧ ಹೆಂಡತಿಯ ದ್ರೋಹ ತಾಳಲಾರದೆ ಪತಿ ಆತ್ಮಹತ್ಯೆ; ಮಗು ಮಾರಾಟ, ಮತ್ತೊಬ್ಬನ ಜೊತೆ ಮದುವೆಯಾದ ಆರೋಪ..!

ಹೆಂಡತಿಯ ದ್ರೋಹ ತಾಳಲಾರದೆ ಪತಿ ಆತ್ಮಹತ್ಯೆ; ಮಗು ಮಾರಾಟ, ಮತ್ತೊಬ್ಬನ ಜೊತೆ ಮದುವೆಯಾದ ಆರೋಪ..!

0

ಹೈದರಾಬಾದ್ : ತೆಲಂಗಾಣದ ಹೈದರಾಬಾದ್‌ನಲ್ಲಿ ಶಾಕ್ ಮೂಡಿಸುವ ಘಟನೆ ನಡೆದಿದೆ. ಪತ್ನಿಯ ನಡೆಗೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಯಾತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮೃತನನ್ನು ಗೋವರ್ಧನ್ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳಿಂದ ಸರಿತಾ ಎಂಬ ಯುವತಿಯೊಂದಿಗೆ ಪ್ರೀತಿಯಲ್ಲಿ ಇದ್ದ ಆತ, ಕುಟುಂಬದವರ ವಿರೋಧದ ನಡುವೆಯೇ ಆಕೆಯನ್ನು ಮದುವೆಯಾಗಿದ್ದನು. ಬಳಿಕ ದಂಪತಿಗೆ ಒಂದು ಮಗು ಕೂಡ ಜನಿಸಿತ್ತು.

ಆದರೆ ಕಳೆದ ಕೆಲವು ತಿಂಗಳಿಂದ ಇಬ್ಬರ ನಡುವೆ ಜಗಳಗಳು ಹೆಚ್ಚಾಗಿದ್ದವು ಎನ್ನಲಾಗಿದೆ. ಇದೇ ವೇಳೆ ಸರಿತಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ತಮ್ಮ ಮಗುವನ್ನೇ ಬೇರೆವರಿಗೆ ನೀಡಿ ಮತ್ತೊಬ್ಬನ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಬೆಳವಣಿಗೆಗಳಿಂದ ಗೋವರ್ಧನ್ ತೀವ್ರ ಮನೋವ್ಯಥೆಗೆ ಒಳಗಾಗಿದ್ದನು ಎಂದು ಹೇಳಲಾಗಿದೆ. ಘಟನೆ ನಡೆದ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಆತ ತನ್ನ ಕೊಠಡಿಗೆ ಹೋಗಿದ್ದನು. ಬೆಳಿಗ್ಗೆ ತನಕ ಹೊರಗೆ ಬರದಿದ್ದರಿಂದ ಮನೆಯವರು ಬಾಗಿಲು ಒಡೆದು ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಆತ್ಮಹತ್ಯೆಗೆ ಮುನ್ನ ಗೋವರ್ಧನ್ ಸೆಲ್ಫಿ ವಿಡಿಯೋ ಕೂಡ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ. ಅದರಲ್ಲಿ ಪತ್ನಿಯ ವರ್ತನೆಯೇ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಮಗುವಿನ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.