ಮನೆ ಸುದ್ದಿ ಜಾಲ ನಮ್ಮ  ಮೆಟ್ರೋ ಪಿಲ್ಲರ್’ಗಳ ಮೇಲೆ ಡಿಜಿಟಲ್ ಜಾಹೀರಾತು ಪ್ರದರ್ಶನಕ್ಕೆ BMRCL  ಸಿದ್ಧತೆ: ಸಾರ್ವಜನಿಕರಿಂದ ತೀವ್ರ ವಿರೋಧ

ನಮ್ಮ  ಮೆಟ್ರೋ ಪಿಲ್ಲರ್’ಗಳ ಮೇಲೆ ಡಿಜಿಟಲ್ ಜಾಹೀರಾತು ಪ್ರದರ್ಶನಕ್ಕೆ BMRCL  ಸಿದ್ಧತೆ: ಸಾರ್ವಜನಿಕರಿಂದ ತೀವ್ರ ವಿರೋಧ

0

ಬೆಂಗಳೂರು : ಬೆಂಗಳೂರಿನ ಜನಜೀವನದ ಅವಿಭಾಜ್ಯ ಅಂಗವಾಗಿರುವ ನಮ್ಮ ಮೆಟ್ರೋ (Namma Metro) ಇದೀಗ ಹೊಸ ವಾಣಿಜ್ಯ ಯೋಜನೆಯತ್ತ ಹೆಜ್ಜೆ ಇಟ್ಟಿದೆ. ಕೇವಲ ಪ್ರಯಾಣಿಕರ ಟಿಕೆಟ್ ಆದಾಯಕ್ಕೆ ಸೀಮಿತವಾಗದೇ, ಹೆಚ್ಚುವರಿ ಆದಾಯ ಮೂಲಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನಗರದಲ್ಲಿನ ಮೆಟ್ರೋ ಪಿಲ್ಲರ್ಗಳನ್ನು ಡಿಜಿಟಲ್ ಹಾಗೂ ವಾಣಿಜ್ಯ ಜಾಹೀರಾತುಗಳಿಗಾಗಿ ಬಳಸಲು ಮುಂದಾಗಿದೆ. ಈ ಸಂಬಂಧ ಬೃಹತ್ ಮಟ್ಟದ ಟೆಂಡರ್ ಆಹ್ವಾನಿಸಲಾಗಿದ್ದು, ನಗರದ ವಿವಿಧ ಭಾಗಗಳಲ್ಲಿ ಮೆಟ್ರೋ ಪಿಲ್ಲರ್ಗಳ ಮೇಲೆ ಎಲ್ಇಡಿ ಡಿಸ್ಪ್ಲೇ ಹಾಗೂ ಡಿಜಿಟಲ್ ಜಾಹೀರಾತು ಫಲಕಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ.

BMRCL ಸಂಸ್ಥೆ “ನಾನ್-ಫೇರ್ ಬಾಕ್ಸ್ ರೆವಿನ್ಯೂ” ಹೆಚ್ಚಿಸುವ ಉದ್ದೇಶದಿಂದ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮೆಟ್ರೋ ನಿಲ್ದಾಣಗಳು, ಪಿಲ್ಲರ್ಗಳು ಹಾಗೂ ಪ್ರಮುಖ ಸಂಚಾರ ಮಾರ್ಗಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಮೂಲಕ ಸಂಸ್ಥೆಯ ಆದಾಯವನ್ನು ಮತ್ತಷ್ಟು ವೃದ್ಧಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಮೆಟ್ರೋ ನಿಲ್ದಾಣಗಳಲ್ಲಿ ಅಂಗಡಿಗಳು, ವ್ಯಾಪಾರ ಮಳಿಗೆಗಳು ಹಾಗೂ ಜಾಹೀರಾತು ವ್ಯವಸ್ಥೆಗಳನ್ನು ಪ್ರಾರಂಭಿಸಿರುವ ಬಿಎಂಆರ್ಸಿಎಲ್, ಇದೀಗ ಪಿಲ್ಲರ್ಗಳ ಮೇಲೆಯೂ ಡಿಜಿಟಲ್ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲು ಮುಂದಾಗಿದೆ.

ಆದರೆ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಶೇಷವಾಗಿ ನಗರದ ಸೌಂದರ್ಯ ಹಾಳಾಗುವ ಭೀತಿ ಹಾಗೂ ರಸ್ತೆ ಸುರಕ್ಷತೆ ಕುಂಠಿತವಾಗುವ ಆತಂಕ ಜನರಲ್ಲಿ ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲಿ ಹೆಚ್ಚು ಬೆಳಕು ಬೀರುವ ಡಿಜಿಟಲ್ ಬೋರ್ಡ್‌ಗಳು ವಾಹನ ಸವಾರರ ಗಮನ ಬೇರೆಡೆ ಸೆಳೆಯುವ ಸಾಧ್ಯತೆ ಇದ್ದು, ಇದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಾರ್ವಜನಿಕರಾದ ವೀರೇಶ್, “ನಗರದ ಅಂದವನ್ನು ಕಾಪಾಡುವ ಬದಲು ಮೆಟ್ರೋ ಸಂಸ್ಥೆ ಹಣ ಗಳಿಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಪಿಲ್ಲರ್ಗಳ ಮೇಲೆ ಅತಿಯಾದ ಡಿಜಿಟಲ್ ಜಾಹೀರಾತುಗಳು ಅಳವಡಿಸಿದರೆ ಅದು ವಾಹನ ಚಾಲಕರಿಗೆ ತೊಂದರೆ ಉಂಟುಮಾಡಲಿದೆ. ವಿಶೇಷವಾಗಿ ರಾತ್ರಿ ವೇಳೆ ಈ ಬೋರ್ಡ್‌ಗಳ ಪ್ರಕಾಶ ಕಣ್ಣಿಗೆ ತೊಂದರೆ ಉಂಟುಮಾಡಬಹುದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವು ನಾಗರಿಕ ಸಂಘಟನೆಗಳು ಕೂಡ ಈ ಯೋಜನೆ ವಿರುದ್ಧ ಧ್ವನಿ ಎತ್ತಿವೆ. ಮೆಟ್ರೋ ಪಿಲ್ಲರ್ಗಳನ್ನು ಜಾಹೀರಾತು ಮಾಧ್ಯಮಗಳಾಗಿ ಪರಿವರ್ತಿಸುವ ಬದಲು ನಗರದಲ್ಲಿ ಹಸಿರು ವಾತಾವರಣ ಮತ್ತು ಸುಂದರ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಡುವೆ ಸಮತೋಲನ ಕಾಪಾಡುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ BMRCL  ಅಧಿಕಾರಿಗಳು ಸಾರ್ವಜನಿಕರ ಆತಂಕವನ್ನು ತಳ್ಳಿ ಹಾಕಿದ್ದಾರೆ. ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌಹಾಣ್ ಪ್ರತಿಕ್ರಿಯಿಸಿ, “ವಿಶ್ವ ದರ್ಜೆಯ ಜಾಹೀರಾತು ಮಾದರಿಯನ್ನು ಜಾರಿಗೆ ತರಲಾಗುತ್ತಿದೆ. ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸುವಾಗ ಸರ್ಕಾರದ ನಿಯಮಾವಳಿ, ರಸ್ತೆ ಸುರಕ್ಷತಾ ಮಾನದಂಡಗಳು ಹಾಗೂ ಸ್ಥಳೀಯ ಆಡಳಿತದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗುವ ಉದ್ದೇಶದಿಂದ ಮೆಟ್ರೋ ಸಂಸ್ಥೆ ಕೈಗೊಂಡಿರುವ ಈ ಯೋಜನೆ ಒಂದು ಕಡೆ ಆದಾಯ ಹೆಚ್ಚಿಸುವ ನಿರೀಕ್ಷೆ ಮೂಡಿಸಿದ್ದರೆ, ಮತ್ತೊಂದೆಡೆ ನಗರ ಸೌಂದರ್ಯ ಮತ್ತು ಟ್ರಾಫಿಕ್ ಸುರಕ್ಷತೆ ಕುರಿತ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಹೇಗೆ ಜಾರಿಗೆ ಬರುತ್ತದೆ ಮತ್ತು ಸಾರ್ವಜನಿಕರ ಅಭಿಪ್ರಾಯಕ್ಕೆ ಎಷ್ಟು ಮಹತ್ವ ನೀಡಲಾಗುತ್ತದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.