ಮನೆ ಸುದ್ದಿ ಜಾಲ ಚಿಕ್ಕಮಗಳೂರು : ನವಜಾತ ಹೆಣ್ಣು ಶಿಶುವನ್ನು ಬೀಸಾಡಿ ಹೋದ ಪಾಪಿ ತಾಯಿ

ಚಿಕ್ಕಮಗಳೂರು : ನವಜಾತ ಹೆಣ್ಣು ಶಿಶುವನ್ನು ಬೀಸಾಡಿ ಹೋದ ಪಾಪಿ ತಾಯಿ

0

ಚಿಕ್ಕಮಗಳೂರು (ಮೇ 20): ಹೆಣ್ಣು ಮಗು ಎಂಬ ಕಾರಣಕ್ಕೋ ಅಥವಾ ಸಮಾಜಕ್ಕೆ ಹೆದರಿಯೋ ಗೊತ್ತಿಲ್ಲ, ಹೆತ್ತ ತಾಯಿಯೇ ತನ್ನ ಮಗುವನ್ನು ರಸ್ತೆ ಬದಿಯ ಮುಳ್ಳಿನ ಪೊದೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಂದು ದಿನದ ಹಸುಗೂಸನ್ನು ಟವೆಲ್‌ನಲ್ಲಿ ಸುತ್ತಿ ಪೊದೆಯಲ್ಲಿ ಎಸೆದು ಹೋಗಿರುವ ಈ ಘಟನೆ ಮನುಕುಲವೇ ತಲೆತಗ್ಗಿಸುವಂತೆ ಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಕುಮಾರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಬುಧವಾರ ಬೆಳಿಗ್ಗೆ ಗ್ರಾಮದ ನೀರುಗಂಟಿಯೊಬ್ಬರು ಎಂದಿನಂತೆ ಗದ್ದೆಗಳಿಗೆ ನೀರು ಬಿಡಲು ಹೋಗುತ್ತಿದ್ದರು. ಈ ವೇಳೆ ರಸ್ತೆ ಬದಿಯ ಪೊದೆಯೊಂದರಲ್ಲಿ ಮಗು ಅಳುವ ಶಬ್ದ ಕೇಳಿಬಂದಿದೆ. ಗಾಬರಿಗೊಂಡ ಅವರು ಹತ್ತಿರ ಹೋಗಿ ನೋಡಿದಾಗ, ಅಲ್ಲಿನ ದೃಶ್ಯ ಕಂಡು ಕಣ್ಣೀರು ಹಾಕಿದ್ದಾರೆ. ರಕ್ತಸಿಕ್ತವಾದ ಸ್ಥಿತಿಯಲ್ಲಿದ್ದ ನವಜಾತ ಹೆಣ್ಣು ಮಗುವನ್ನು ಹಳೆಯ ಟವೆಲ್‌ನಲ್ಲಿ ಸುತ್ತಿ ಪೊದೆಯಲ್ಲಿ ಬಿಟ್ಟು ಹೋಗಿರುವುದು ಕಂಡಿಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅವರು ಸ್ಥಳಕ್ಕೆ ಧಾವಿಸಿ ಮಗುವನ್ನು ಎತ್ತಿಕೊಂಡು ಪ್ರಾಥಮಿಕ ಆರೈಕೆ ಮಾಡಿದ್ದಾರೆ. ಕೂಡಲೇ ಎನ್.ಆರ್.ಪುರ ಸಿಡಿಪಿಓ ವೀರೇಶ್, ಸ್ಥಳೀಯ ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಗುವನ್ನು ತಕ್ಷಣವೇ ಎನ್.ಆರ್.ಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಗೂ ಪ್ರಸ್ತುತ ಮಗು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕ್ಕಮಗಳೂರಿನ ಸರ್ಕಾರಿ ವಿಶೇಷ ದತ್ತು ಸಂಸ್ಥೆಯ ನೇತೃತ್ವದಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ.

ಮಗು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅದನ್ನು ಚಿಕ್ಕಮಗಳೂರಿನ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಹಸ್ತಾಂತರಿಸಲಾಗುವುದು. ಅಲ್ಲಿ ಮಗುವಿನ ಲಾಲನೆ ಪೋಷಣೆ ನಡೆಯಲಿದೆ ಎಂದು ಸಿಡಿಪಿಓ ವೀರೇಶ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಅನಾಥವಾಗಿ ಬಿಟ್ಟು ಹೋದವರು ಯಾರು? ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಯಾರಾದರೂ ಈ ರೀತಿ ಮಾಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗುತ್ತಿದೆ.