ಚಿಕ್ಕಮಗಳೂರು : ಜಿಲ್ಲೆಯಲ್ಲೊಂದು ಮನ ಕಲಕುವ ಘಟನೆ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಮತ್ತೆ ಬಯಲಿಗೆಳೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನೊಬ್ಬ ಸೂಕ್ತ ಚಿಕಿತ್ಸೆ ಸಿಗದೇ ಮೂರು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಅಲೆದಾಡಬೇಕಾಗಿ ಬಂದಿದ್ದು, ಬಡ ಕುಟುಂಬದ ನೋವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ತಾಲೂಕಿನ ಗಾಳಿಗಂಡಿ ನಿವಾಸಿ ರವಿ ಎಂಬ ಯುವಕ ಮೇ 19 ರಂದು ಬೆಳಗ್ಗೆ ಆಲ್ದೂರು ಸಮೀಪದ ಅರೆನೂರು ಗ್ರಾಮದ ಬಳಿ ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದ್ದರು. ಈ ಘಟನೆಯಲ್ಲಿ ರವಿಯ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರವಾದ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು ಎನ್ನಲಅಗುತ್ತಿದೆ.
ಯುವಕನ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವಂತೆ ಜಿಲ್ಲಾಸ್ಪತ್ರೆಯ ವೈದ್ಯರು ಸೂಚಿಸಿದ್ದರು. ಬೆಳಗ್ಗೆ 9 ಗಂಟೆಗೆ ಹೊರಟ ಆಂಬ್ಯುಲೆನ್ಸ್ ಮಧ್ಯಾಹ್ನ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ತಲುಪಿತು. ಆದರೆ “ಐಸಿಯು ಬೆಡ್ ಖಾಲಿ ಇಲ್ಲ” ಎಂಬ ಕಾರಣ ನೀಡಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಫಾದರ್ ಮುಲ್ಲರ್ ಆಸ್ಪತ್ರೆಗೆ ತೆರಳಿದರೂ ಅಲ್ಲಿಯೂ “ತಜ್ಞ ವೈದ್ಯರಿಲ್ಲ, ಬೆಡ್ ಇಲ್ಲ” ಎಂಬ ಉತ್ತರವೇ ಸಿಕ್ಕಿತು. ನಂತರ ಸುರತ್ಕಲ್ ಸಮೀಪದ ಮುಕ್ಕಾದ ಖಾಸಗಿ ಆಸ್ಪತ್ರೆಗೆ ತೆರಳಿದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ವೆಚ್ಚದ ಮಾತು ಕೇಳಿ ಆತಂಕ ಮತ್ತಷ್ಟು ಹೆಚ್ಚಾಯಿತು. ಹಣದ ಕೊರತೆಯಿಂದ ಅಸಹಾಯಕರಾದ ಕುಟುಂಬ ರೋಗಿಯನ್ನು ಮರಳಿ ಆಲ್ದೂರು ತಾಲೂಕು ಆಸ್ಪತ್ರೆಗೆ ಕರೆತರಬೇಕಾಯಿತು. ಈ ವೇಳೆ ಎರಡು ಹಗಲು ಹಾಗೂ ಒಂದು ರಾತ್ರಿಯಿಡಿ ರವಿ ಆಂಬ್ಯುಲೆನ್ಸ್ನಲ್ಲೇ ನರಳಾಡಬೇಕಾಯಿತು. ಯುವಕನ ಸ್ಥಿತಿ ಕಂಡ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದು, ಸ್ವತಃ ಹಣ ಸಂಗ್ರಹಿಸಿ ಆಂಬ್ಯುಲೆನ್ಸ್ ವೆಚ್ಚ ಭರಿಸಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದರು. ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ತಲುಪಿದರೂ ಸಂಜೆವರೆಗೆ ಆಸ್ಪತ್ರೆಗೆ ದಾಖಲಾತಿ ಪ್ರಕ್ರಿಯೆ ನಡೆದಿದ್ದು, ಅಪಘಾತ ಸಂಭವಿಸಿ ಒಂದೂವರೆ ದಿನ ಕಳೆದ ಬಳಿಕವೇ ಚಿಕಿತ್ಸೆ ಆರಂಭವಾಗಿದೆ ಎಂದು ತಿಳಿದುಬಂದಿದೆ.
















