ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮನ ವೇಳೆ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಚಿವರಿಗೆ ಘೇರಾವ್ ಹಾಕಲು ಮುಂದಾದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದರು. ಕೆಡಿಪಿ ಸಭೆಗೆ ಸಚಿವ ಮಧು ಬಂಗಾರಪ್ಪ ಆಗಮಿಸುತ್ತಿದ್ದಂತೆಯೇ ಬಜರಂಗದಳ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟನೆ ಆರಂಭಿಸಿದರು. ಸಚಿವರ ವಿರುದ್ಧ ಘೇರಾವ್ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ಪ್ರಮುಖರಾದ ಅಂಕುಶ್, ಯೋಗೇಶ್ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು ಎನ್ನಲಾಗುತ್ತಿದೆ.
ಈ ಕುರಿತು ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಎರಡು ಪೊಲೀಸ್ ವ್ಯಾನ್‌ಗಳನ್ನು ತರಿಸಲಾಯಿತು. ಬಳಿಕ ಕಾರ್ಯಕರ್ತರನ್ನು ಬಂಧಿಸಿ ಪೊಲೀಸರು ಸ್ಥಳದಿಂದ ಕರೆದೊಯ್ದರು. ಬಂಧನದ ವೇಳೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕೆಲಕಾಲ ಸಭಾ ಸ್ಥಳದ ಸುತ್ತಮುತ್ತ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದರ ನಡುವೆ ಸಚಿವ ಮಧು ಬಂಗಾರಪ್ಪ ಕೇವಲ ರೈತರ ಮನವಿಯನ್ನು ಸ್ವೀಕರಿಸಿ ನೇರವಾಗಿ ಕೆಡಿಪಿ ಸಭೆಗೆ ತೆರಳಿದರು. ಕಾರ್ಯಕರ್ತರ ಮನವಿ ಸ್ವೀಕರಿಸದ ಹಿನ್ನೆಲೆ ಬಜರಂಗದಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಘೇರಾವ್ ಹಾಕಲು ಕಾರಣವಾಯಿತು ಎನ್ನಲಾಗುತ್ತಿದೆ.


















