ಬೆಂಗಳೂರು: ನ್ಯಾಯಾಲಯದ ಆವರಣದಲ್ಲಿ ಮದ್ಯದ ಬಾಟಲ್ನೊಂದಿಗೆ ತಿರುಗಾಡಿದ್ದ ಕೊಲೆಗೆ ಯತ್ನಿಸಿದ್ದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಕೊಲೆ ಯತ್ನ ಪ್ರಕರಣದಲ್ಲಿ ಪದೇ ಪದೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮಂಜೂರಾಗಿದ್ದ ಜಾಮೀನನ್ನು ರದ್ದುಪಡಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಮೈಸೂರು ತಾಲೂಕಿನ ಬೆಳವಾಡಿಯ ನಿವಾಸಿ ಶಿವಕುಮಾರ್ ಅಲಿಯಾಸ್ ಆರ್.ಎಸ್.ಶಿವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ರಜಾಕಾಲದ ನ್ಯಾಯಪೀಠ, ಜಾಮೀನು ನಿರಾಕರಿಸಿದೆ ಎಂದು ತಿಳಿಸಲಾಗಿದೆ.
ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿಲ್ಲ ಎಂಬ ಆರೋಪವಿದೆ. ಆದರೂ, ನ್ಯಾಯಾಲಯದ ಆವರಣದಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡು ಓಡಾಡಿದ್ದಾರೆ. ಅದಕ್ಕೆ ಸಿಸಿಟಿವಿ ದೃಶ್ಯಗಳು ಪುರಾವೆಗಳನ್ನು ಒದಗಿಸಿವೆ. ಅದನ್ನು ವಿಚಾರಣಾ ನ್ಯಾಯಾಲಯ ನ್ಯಾಯಾಧೀಶರು ಖುದ್ದು ಪರಿಶೀಲಿಸಿದ ಬಳಿಕ ಜಾಮೀನು ನಿರಾಕರಿಸಿದ್ದಾರೆ. ಮತ್ತಷ್ಟು ದಿನ ಜೈಲಿನಲ್ಲಿದ್ದರೆ ಎಲ್ಲವೂ ಸರಿಹೋಗಲಿದೆ ಎಂದು ಪೀಠ ತಿಳಿಸಿತು. ಅಲ್ಲದೇ, ಅರ್ಜಿದಾರರ ವಿರುದ್ಧ ಆರೋಪವನ್ನು ಮತ್ತೊಬ್ಬ ವ್ಯಕ್ತಿ ನ್ಯಾಯಾಲಯಕ್ಕೆ ವಿವರಿಸಿದ್ದರೆ ಬೇರೆ ರೀತಿಯಲ್ಲಿ ಇರುತ್ತಿತ್ತು. ಆದರೆ, ನ್ಯಾಯಾಧೀಶರೇ ಅದನ್ನು ಪರಿಶೀಲಿಸಿದ್ದಾರೆ. ಆದ್ದರಿಂದ ಆರೋಪವನ್ನು ಅಲ್ಲಗಳೆಯುವಂತಿಲ್ಲ ಎಂದು ಪೀಠ ಹೇಳಿ, ಜಾಮೀನು ನೀಡಲು ನಿರಾಕರಿಸಿತು. ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಜಾಮೀನನ್ನು ವಿಚಾರಣಾ ನ್ಯಾಯಾಲಯ ರದ್ದುಪಡಿಸಿದೆ. ಅದಕ್ಕೂ ಮುನ್ನ ನೋಟಿಸ್ ಜಾರಿ ಮಾಡಿಲ್ಲ. ಮದ್ಯದ ಬಾಟಲ್ನ್ನು ನ್ಯಾಯಾಲಯದ ಆವರಣಕ್ಕೆ ತಂದಿರುವ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಬಹುದಾಗಿತ್ತು. ಆರೋಪಿ ರೈತನಾಗಿದ್ದು ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ಆದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಅಲ್ಲದೇ, ಆರೋಪಿ ಮದ್ಯದ ಬಾಟಲಿ ತಂದಿದ್ದಾನೆ ಎಂಬ ಆರೋಪವಿದೆ. ಆದರೆ, ಬಾಟಲ್ನಲ್ಲಿ ಮದ್ಯ ಇತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಇದಕ್ಕೆ ಪೀಠ, ಪ್ರಕರಣದಲ್ಲಿ ಕರೆದಾಗ ನ್ಯಾಯಾಧೀಶರ ಮುಂದೆ ಹಾಜರಾಗಲಿಲ್ಲ. ಆದರೂ ಮದ್ಯದ ಬಾಟಲಿಯ ಜೊತೆ ನ್ಯಾಯಾಲಯದ ಆವರಣಕ್ಕೆ ಬರುತ್ತಾರೆ ಎಂದರೆ ಹೇಗೆ? ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ವಕೀಲರು, ವಿಚಾರಣೆಗೆ ಹಾಜರಾಗದಿರುವುದು ಬೇರೆ ಪ್ರಕರಣವಾಗಿದೆ ಎಂದು ತಿಳಿಸಿದರು. ವಾದ ಮುಂದುವರೆಸಿದ ವಕೀಲರು, ಅರ್ಜಿದಾರರು ಮದ್ಯದ ಬಾಟಲಿ ತಂದಿದ್ದರು ಎಂಬ ಆರೋಪವಿದೆ. ಆದರೆ, ಅದರಲ್ಲಿ ಮದ್ಯ ಇತ್ತು ಎಂದು ಪೊಲೀಸರ ಹೇಳಿಕೆಯ ಮೇಲೆ ಆದೇಶ ಮಾಡಲಾಗಿದೆ ಎಂದರು. ಇದಕ್ಕೆ ಪೀಠ, ಸಿಸಿಟಿವಿ ಯಾರದ್ದಾಗಿತ್ತು ಎಂದು ಪ್ರಶ್ನಿಸಿತು. ಆಗ ವಕೀಲರು, ಬಾಟಲಿಯಲ್ಲಿ ಮದ್ಯ ಇತ್ತು ಎಂದು ಸಿಸಿಟಿವಿಯಲ್ಲಿ ಹೇಗೆ ಗೊತ್ತಾಗಲಿದೆ ಎಂದು ಪ್ರಶ್ನಿಸಿದರು. ಈ ವೇಳೆ ಪೀಠ, ಬಾಟಲಿಯಲ್ಲಿದ್ದುದು ಏನು ಎಂಬುದನ್ನು ತನಿಖೆಗೆ ಆದೇಶಿಸಿ, ತನಿಖೆ ಮುಗಿಯುವವರೆಗೂ ಅರ್ಜಿದಾರರನ್ನು ಜೈಲಿನಲ್ಲಿಯೇ ಇರಿಸೋಣ ಎಂದು ತಿಳಿಸಿ, ವಿಚಾರಣೆಯನ್ನು ಜೂನ್ ನಾಲ್ಕನೇ ವಾರಕ್ಕೆ ಮುಂದೂಡಿತು. ನಂತರ ಪ್ರತಿಕ್ರಿಯಿಸಿದ ಪೀಠ, ನ್ಯಾಯಾಲಯದ ಅಧಿಕಾರಿಯಾಗಿ ನೀವು(ವಕೀಲರು) ಇಂಥದ್ದನ್ನು ಪ್ರೋತ್ಸಾಹಿಸಬಾರದು. ವಾದ ಮಾಡುವುದು ನಿಮ್ಮ ವೃತ್ತಿ. ಆದರೆ, ಕೋರ್ಟ್ ಬಗ್ಗೆ ಗಂಭೀರತೆಯೂ ಇರಬೇಕು ಎಂದು ತಿಳಿಸಿತು ಎನ್ನಲಾಗಿದೆ.
















