ಬೆರ್ಹಾಂಪುರ(ಒಡಿಶಾ): ಗಂಜಾಂನ ಪುರುಷೋತ್ತಮಪುರ ಪೊಲೀಸ್ ಠಾಣೆಯ ಲಡ್ಕಪಲ್ಲಿ ಚೌಕ್ನಲ್ಲಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆರು ಜನರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಕಿರಣ್ ಬೆಹೆರಾ (10), ಸನ್ನಿ ಬೆಹೆರಾ (12), ನೀಲಾ ಬೆಹೆರಾ (50), ನರ್ಸು ಬೆಹೆರಾ (43), ರತಾನಿ ಬೆಹೆರಾ (40) ಮತ್ತು ಮಲ್ಲಿ ಬೆಹೆರಾ (75) ಮೃತ ದುರ್ದೈವಿಗಳು. ಮೃತರಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ತಕ್ಷಣ ಕೊಡಲಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆರ್ಹಾಂಪುರ ಎಂಕೆಸಿಜಿ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎರೇಂದ್ರದಿಂದ ಸಿಂಶಾನಿ ಪೀಠಕ್ಕೆ ಉತ್ಸವವೊಂದರಲ್ಲಿ ಭಾಗವಹಿಸಲು ಆಟೋವೊಂದು ಸ್ಥಳೀಯ ಜನರನ್ನು ಕರೆದೊಯ್ಯುತ್ತಿತ್ತು. ಈ ವೇಳೆ, ಪುರುಷೋತ್ತಮಪುರ ಪೊಲೀಸ್ ಠಾಣೆ ಸಿಕುಲಾ ಬಳಿಯ ಲಡ್ಕಪಲ್ಲಿಯಲ್ಲಿ ಡೈಮಂಡ್ ಎಂಬ ಖಾಸಗಿ ಟ್ರಾವೆಲ್ ಬಸ್ ಆಟೋಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸಾವು – ನೋವುಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅಲ್ಕಾ ಬೆಹೆರಾ (17), ಕನಕ್ ಬೆಹೆರಾ (60), ಭಾಗ್ಯ ಬೆಹೆರಾ (55) ಮತ್ತು ಝಿಲಿ ಬೆಹೆರಾ (40) ಎನ್ನುವವರನ್ನು ಕೊಡಲದಿಂದ ಬೆರ್ಹಾಂಪುರ್ ಬಡಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪುರುಷೋತ್ತಮಪುರದ ಎಸ್ಡಿಒ ಸುಜಿತ್ ಕುಮಾರ್ ನಾಯಕ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ, ಕೊಡಲ ಪೊಲೀಸ್ ತಂಡವು ಅಪಘಾತದ ಬಗ್ಗೆ ತನಿಖೆ ಆರಂಭಿಸಿದೆ ಎಂಬುದ್ದಾಗಿದೆ.

















