ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದೆ. ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಸಮೀಪ ನಿರ್ಮಾಣವಾಗಲಿರುವ ಈ ಕ್ರೀಡಾಂಗಣಕ್ಕೆ ಇಂದು (ಶನಿವಾರ) ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕರ್ನಾಟಕ ಗೃಹಮಂಡಳಿ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಸೂರ್ಯನಗರ 4ನೇ ಹಂತದ ಬಡಾವಣೆಯಲ್ಲಿ ಈ ಅತ್ಯಾಧುನಿಕ ಕ್ರೀಡಾಂಗಣ ತಲೆಯೆತ್ತಲಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣವು ಬರೋಬ್ಬರಿ 80,000 ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕಳೆದ ಒಂದು ವಾರದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ.
ಸಾರ್ವಜನಿಕರಿಗಾಗಿ ಸುಮಾರು ಒಂದು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಸಾವಿರ ಮಂದಿ ಗಣ್ಯರಿಗೆ ವಿಶೇಷ ಆಸನಗಳು ಸೇರಿದಂತೆ ಒಟ್ಟು ಒಂದು ಲಕ್ಷ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದ್ದಾರೆ. ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಊಟದ ವ್ಯವಸ್ಥೆಗಾಗಿ ಹಾಕಲಾಗಿದ್ದ ಜರ್ಮನ್ ಟೆಂಟ್‌ಗಳು ಸ್ವಲ್ಪ ಮಟ್ಟಿಗೆ ಹಾನಿಗೊಳಗಾಗಿದ್ದವು. ಇದರಿಂದ ಕಾರ್ಯಕ್ರಮದ ಸಿದ್ಧತೆಗೆ ಕೊಂಚ ಅಡ್ಡಿಯಾಯಿತಾದರೂ, ಇಂದು ಮುಂಜಾನೆಯಿಂದಲೇ ಯುದ್ಧೋಪಾದಿಯಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಇಂದು ರಾತ್ರಿ ಮಳೆ ಬಂದರೂ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾಳೆಯ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆರವೇರಲಿದೆ ಎಂದು ಸಂಘಟಕರು ಭರವಸೆ ನೀಡಿದ್ದಾರೆ. ದೇಶದ ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳು ಮತ್ತು ಆಸನ ಸಂಖ್ಯೆ;
- ನರೇಂದ್ರ ಮೋದಿ ಸ್ಟೇಡಿಯಂ – ಅಹಮದಾಬಾದ್, ಗುಜರಾತ್ -1,32,000 – ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ.
- ಈಡನ್ ಗಾರ್ಡನ್ಸ್, ಕೋಲ್ಕತಾ, ಪಶ್ಚಿಮ ಬಂಗಾಳ – 68,000 – ಭಾರತದ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಸ್ಟೇಡಿಯಂ.
- ರಾಯ್‌ಪುರ ಇಂಟರ್ನ್ಯಾಷನಲ್ ಸ್ಟೇಡಿಯಂ – ರಾಯ್‌ಪುರ, ಛತ್ತೀಸ್‌ಗಢ 65,400 – ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ

















