ಮನೆ ಸುದ್ದಿ ಜಾಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬೆಂಗಳೂರು ಭೇಟಿ: ಅದ್ಧೂರಿ ಸ್ವಾಗತ ರದ್ದು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬೆಂಗಳೂರು ಭೇಟಿ: ಅದ್ಧೂರಿ ಸ್ವಾಗತ ರದ್ದು

0

ಬೆಂಗಳೂರು, ಮೇ 23: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಬೆಂಗಳೂರು ಭೇಟಿಗೆ ಸಂಬಂಧಿಸಿದ ಅದ್ಧೂರಿ ಸ್ವಾಗತ ಕಾರ್ಯಕ್ರಮಗಳಿಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದೆ. ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ನಿತಿನ್ ನಬಿನ್ ಅವರಿಗೆ ಭವ್ಯ ಸ್ವಾಗತ, ರೋಡ್ ಶೋ ಹಾಗೂ ಮೆರವಣಿಗೆ ಏರ್ಪಡಿಸಲು ಸಿದ್ಧತೆ ನಡೆದಿದ್ದರೂ, ಇದೀಗ ಸರಳ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಲಾಗಿದೆ.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಿರಂತರವಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಇಂಧನ ಮಿತ ಬಳಕೆಗೆ ಕರೆ ನೀಡಿರುವ ಬೆನ್ನಲ್ಲೇ, ಬಿಜೆಪಿ ನಾಯಕತ್ವವೂ ಮಿತ ವ್ಯಯದ ಸಂದೇಶ ನೀಡಲು ಮುಂದಾಗಿದೆ.ಬೆಂಗಳೂರು ಏರ್ಪೋರ್ಟ್‌ನಿಂದ ನಿತಿನ್ ನಬಿನ್ ಅವರು ಕೇವಲ ನಾಲ್ಕು ಎಲೆಕ್ಟ್ರಿಕ್ ಕಾರುಗಳಲ್ಲಿ ಸಂಚರಿಸಲಿದ್ದಾರೆ. ಯಾವುದೇ ಭಾರೀ ವಾಹನಗಳ ಕಾನ್ವಾಯ್, ಬೈಕ್ ರ್ಯಾಲಿ ಅಥವಾ ಮೆರವಣಿಗೆಗೆ ಅವಕಾಶ ನೀಡಿಲ್ಲ. ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡುವ ಮೂಲಕ ಪಕ್ಷ ಹೊಸ ಸಂದೇಶ ರವಾನಿಸಲು ಮುಂದಾಗಿದೆ.

ನಾಳೆ ಬೆಳಿಗ್ಗೆ ನಿತಿನ್ ನಬಿನ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಲಿದ್ದಾರೆ. ಬಳಿಕ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಲಿದ್ದು, ಹಾರ-ತುರಾಯಿ ಹಾಗೂ ಅದ್ಧೂರಿ ಸ್ವಾಗತ ಕಾರ್ಯಕ್ರಮಗಳಿಲ್ಲದೆ ಅತ್ಯಂತ ಸರಳವಾಗಿ ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

ಇನ್ನೊಂದೆಡೆ, ದೇಶದಲ್ಲಿ ಇಂದು ಸತತ ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗಿದೆ. ಇಂಧನ ದರ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭೇಟಿ ಸರಳವಾಗಿ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಇಂದು ‘ರೋಜ್ಗಾರ್ ಮೇಳ’ ಕಾರ್ಯಕ್ರಮದ ಮೂಲಕ ದೇಶದಾದ್ಯಂತ 51 ಸಾವಿರಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತಿದೆ ಎಂಬ ಸಂದೇಶ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.